ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನಲ್ಲಿ ಮಾನವೀಯತೆ ಮರೆಸುವಂತಹ ಘಟನೆ ನಡೆದಿದೆ. KSRTC ಬಸ್‌ನಲ್ಲಿ ಸೀಟ್ ವಿಚಾರವಾಗಿ ನಡೆದ ವಾಗ್ವಾದ ಹಲ್ಲೆಗೆ ತಿರುಗಿದೆ. 70 ವರ್ಷದ ವೃದ್ಧನ ಮೇಲೆ ಮಹಿಳೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಶೃಂಗೇರಿಯಿಂದ ಎನ್.ಆರ್.ಪುರ ಮಾರ್ಗವಾಗಿ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ KSRTC ಬಸ್‌ನಲ್ಲಿ ಈ ಘಟನೆ ನಡೆದಿದೆ. ಮಾಹಿತಿ ಪ್ರಕಾರ, ಹಿರಿಯ ನಾಗರಿಕರಿಗಾಗಿ ಮೀಸಲಾದ ಸೀಟ್‌ನಲ್ಲಿ ವೃದ್ಧರು ಕುಳಿತಿದ್ದರು. ಇದೇ ವೇಳೆ ಸೀಟಿನ ವಿಚಾರವಾಗಿ ಮಹಿಳೆ ಮತ್ತು ವೃದ್ಧರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ವಿವಾದ ತೀವ್ರಗೊಂಡ ಹಿನ್ನೆಲೆ ಮಹಿಳೆ ವೃದ್ಧನ ಮೇಲೆ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಆರೋಪವೂ ಕೇಳಿಬಂದಿದೆ. ಹಲ್ಲೆಯ ಪರಿಣಾಮ ವೃದ್ಧನ ಹಣೆಯ ಎಡಭಾಗದಲ್ಲಿ ಗಾಯವಾಗಿ ರಕ್ತಸ್ರಾವ ಉಂಟಾಗಿದೆ. ಘಟನೆಯಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಬೆಚ್ಚಿಬಿದ್ದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಸಿಬ್ಬಂದಿ ಮಹಿಳೆಯನ್ನು ಬಸ್ಸಿನಿಂದ ಕೆಳಗಿಳಿಸಿ ಎನ್.ಆರ್.ಪುರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಗಾಯಗೊಂಡ ವೃದ್ಧರಿಗೆ ಚಿಕಿತ್ಸೆ ನೀಡಲಾಗಿದ್ದು, ಘಟನೆ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮುಂದುವರಿದಿದೆ.




