4 ವರ್ಷ ಕಳೆದರೂ ಮುಗಿಯದ 320 ಕೋಟಿಯ ಕಾಮಗಾರಿ!

ಹುಬ್ಬಳ್ಳಿ ನಗರದ ಪ್ರಮುಖ ಸಂಪರ್ಕ ಕೇಂದ್ರವಾದ ಚನ್ನಮ್ಮ ವೃತ್ತದ ಫ್ಲೈಓವರ್ ಕಾಮಗಾರಿ ಮತ್ತೆ ವಿಳಂಬವಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹಲವು ಬಾರಿ ಗಡುವು ನೀಡಿದರೂ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆ, ಇದೀಗ ಆಗಸ್ಟ್ ಒಳಗೂ ಕಾಮಗಾರಿ ಮುಗಿಯುವುದು ಅನುಮಾನ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. 320 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಫ್ಲೈಓವರ್ ಕಾಮಗಾರಿ 2020ರಿಂದಲೇ ನಡೆಯುತ್ತಿದ್ದು, ಆರಂಭದಿಂದಲೂ ವಿಳಂಬದ ಸಮಸ್ಯೆ ಎದುರಿಸುತ್ತಿದೆ. ಈಗಾಗಲೇ ಅನೇಕ ಬಾರಿ ಗುತ್ತಿಗೆ ಪಡೆದ ಕಂಪನಿಗೆ ಗಡುವು ನೀಡಲಾಗಿದ್ದರೂ, ಕಾಮಗಾರಿ ವೇಗ ಪಡೆಯದೇ ಇರುವುದರಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಇದೀಗ ಗುತ್ತಿಗೆ ಪಡೆದ ಕಂಪನಿ ಮತ್ತೊಮ್ಮೆ ಆರು ತಿಂಗಳ ಅವಧಿ ವಿಸ್ತರಣೆಗಾಗಿ ಮನವಿ ಮಾಡಿದ್ದು, ಡಿಸೆಂಬರ್ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಈ ಭರವಸೆಗಳ ಮೇಲೂ ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ. ಅಧಿಕಾರಿಗಳ ಸಮನ್ವಯ ಕೊರತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದ ಹುಬ್ಬಳ್ಳಿಯ ಜನರು ಪ್ರತಿದಿನ ಟ್ರಾಫಿಕ್ ಕಿರಿಕಿರಿ, ಧೂಳು ಮತ್ತು ವಾಹನ ದಟ್ಟಣೆಯಿಂದ ನರಳುತ್ತಿದ್ದಾರೆ. ನಗರದ ಹೃದಯ ಭಾಗದಲ್ಲೇ ನಡೆಯುತ್ತಿರುವ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದು ವಾಹನ ಸವಾರರು ಮತ್ತು ವ್ಯಾಪಾರಸ್ಥರ ಆಕ್ರೋಶಕ್ಕೂ ಕಾರಣವಾಗಿದೆ. ಜನರ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

About The Author