ಭಾರತ ಹವಾಮಾನ ಇಲಾಖೆ ತಂಪಾದ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಬಿಸಿಲಿನ ಬೇಗೆಯನ್ನು ಮರೆತುಬಿಡಿ, ಏಕೆಂದರೆ ಮುಂದಿನ 4-5 ದಿನಗಳ ಕಾಲ ರಾಜಧಾನಿಯಲ್ಲಿ ಮಳೆಯ ಆರ್ಭಟ ಶುರುವಾಗಲಿದೆ. ಹವಾಮಾನ ಇಲಾಖೆಯು ಬೆಂಗಳೂರಿಗೆ ಅಧಿಕೃತವಾಗಿ ಯೆಲ್ಲೋ ಅಲರ್ಟ್ ಘೋಷಿಸಿದೆ. ವಾರದ ಮೊದಲ ದಿನವೇ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ತಾಪಮಾನವು ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದ್ದು, ವಾತಾವರಣ ಕೂಲ್ ಆಗಿರಲಿದೆ ಎಂದು ವರದಿ ಮಾಡಿದೆ.
ರಾಜಧಾನಿಯಲ್ಲಿ ಹವಾಮಾನ ಹೀಗೆಯೇ ಮುಂದುವರಿಯಲಿದ್ದು, ಗುಡುಗಿನ ಆರ್ಭಟದೊಂದಿಗೆ ಮಳೆ ಸುರಿಯುವ ಸಾಧ್ಯತೆ ದಟ್ಟವಾಗಿದೆ. ಮೇ 20 (ಬುಧವಾರ)- ಈ ದಿನ ನಗರದಲ್ಲಿ ಮತ್ತಷ್ಟು ತೀವ್ರ ಗಾಳಿ-ಮಳೆಯಾಗುವ ನಿರೀಕ್ಷೆಯಿದೆ.
ಐಎಂಡಿ ವರದಿಯ ಪ್ರಕಾರ, ಬಲವಾದ ಗಾಳಿಯೊಂದಿಗೆ ಭಾರೀ ಮಳೆ ಅಥವಾ ಗುಡುಗು ಸಹಿತ ಮಳೆಯಾಗಲಿದ್ದು, ಜನ ಮುನ್ನೆಚ್ಚರಿಕೆ ವಹಿಸುವುದು ಒಳಿತು. ಕೇವಲ ಬೆಂಗಳೂರು ಮಾತ್ರವಲ್ಲದೆ, ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಹಾಸನ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲೂ ಸೋಮವಾರದಿಂದಲೇ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡ ಹಾಗೂ ಬಿಸಿಲಿನ ವಾತಾವರಣದೊಂದಿಗೆ ಮಧ್ಯಾಹ್ನ ನಂತರ, ಸಂಜೆ, ರಾತ್ರಿ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಮೇ 19 ಅಥವಾ 20ರಿಂದ ಅರಬ್ಬಿ ಸಮುದ್ರದ ಕಡೆಯಿಂದ ಗಾಳಿಯು ಮುಂಗಾರು ಮಾರತಗಳ ರೀತ ಚಲನೆಯು ಆರಂಭವಾಗುವ ಲಕ್ಷಣಗಳಿವೆ.
ಆದರೆ ಮಳೆ ದುರ್ಬಲವಾಗಿರುವ ಸಾಧ್ಯತೆಗಳಿವೆ, ರಾಜ್ಯದ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಳ್ಳಾರಿ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಈಗಿನಂತೆ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮೇ 19ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಸೂಚನೆಗಳಿವೆ.
ರಾಜ್ಯದ ದಕ್ಷಿಣ ಒಳನಾಡಿನ ದಾವಣಗೆರೆ, ವಿಜಯನಗರ, ಚಿತ್ರದುರ್ಗ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಗಾಳಿಯ ಒತ್ತಡ ಹೆಚ್ಚಿದ್ದರೆ ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆಗಳಿವೆ. ಮೇ 19ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ.. ಅರಬ್ಬಿ ಸಮುದ್ರದಲ್ಲಿ ಮೇ 19ರಂದು ಸಣ್ಣ ಪ್ರಮಾಣದ ತಿರುಗುವಿಕೆಯು ಮುಂಗಾರು ಮುಂದುವರಿಕೆಗ ಸ್ವಲ್ಪ ತೊಡಕಾಗಬಹುದು. ಆದರೆ ಬಂಗಾಳಕೊಲ್ಲಿಯಲ್ಲಿ ತಮಿಳುನಾಡು ಕರಾವಳಿಯ ಮೂಲಕ ಒಳ ನುಗ್ಗುವ ಗಾಳಿಯು ದಿಕ್ಕು ಬಧಲಿಸಿ ಈಶಾನ್ಯದ ಕಡೆಗೆ ಸಾಗಲಿದೆ. ಇದರಿಂದ ನೈರುತ್ಯ ಮುಂಗಾರು ಸಾಗಿ ಬರಲು ಅನುಕೂಲವಾಗಬಹುದು.




