36 ಅಕ್ರಮ ಅಡ್ಡೆಗಳ ಮೇಲೆ ದಾಳಿ 65 ಟಿಪ್ಪರ್‌, 18 ಹಿಟಾಚಿ ಜಪ್ತಿ

ಬಾಗಲಕೋಟೆಯಲ್ಲಿ ವರ್ಷಗಳಿಂದ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ಲೋಕಾಯುಕ್ತ ದೊಡ್ಡ ಹೊಡೆತ ನೀಡಿದೆ. ಜಿಲ್ಲೆಯ ಹಲವು ಕಡೆ ಏಕಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳು, ಮರಳು ಮಾಫಿಯಾದ ಅಕ್ರಮ ಅಡ್ಡೆಗಳನ್ನು ಬಯಲಿಗೆಳೆದಿದ್ದಾರೆ.

ನದಿಗಳಿಂದ ಅಕ್ರಮವಾಗಿ ಮರಳು ತೆಗೆಯುವುದು, ರಾತ್ರಿ ವೇಳೆ ಸಾಗಾಟ ಮಾಡುವುದು, ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುವುದು, ಇವೆಲ್ಲಕ್ಕೂ ಇದೀಗ ಲೋಕಾಯುಕ್ತ ಬ್ರೇಕ್ ಹಾಕಿದೆ. ಬಾಗಲಕೋಟೆ ಜಿಲ್ಲೆಯ ಇತಿಹಾಸದಲ್ಲೇ ದೊಡ್ಡ ಕಾರ್ಯಾಚರಣೆ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಮರಳು ದಂಧೆಗಾರರಿಗೆ ಶಾಕ್ ನೀಡಿದ್ದಾರೆ.

ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಮಾರ್ಗದರ್ಶನದಲ್ಲಿ ಹಾಗೂ ಎಸ್‌ಪಿ ಮಹಾನಿಂಗ ನಂದಗಾವಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. 8 ಜಿಲ್ಲೆಗಳ ಅಧಿಕಾರಿಗಳು ಮತ್ತು 100ಕ್ಕೂ ಹೆಚ್ಚು ಸಿಬ್ಬಂದಿ ಸೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ದಾಳಿ ನಡೆಸಿದ್ದಾರೆ.

ಮುಧೋಳ, ಬಾದಾಮಿ, ಹುನಗುಂದ, ಇಳಕಲ್, ಜಮಖಂಡಿ ಮತ್ತು ಬಾಗಲಕೋಟೆ ಭಾಗಗಳ 36 ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಲಾಗಿದೆ. ಕಾರ್ಯಾಚರಣೆಯಲ್ಲಿ 65 ಟಿಪ್ಪರ್‌ಗಳು, 18 ಹಿಟಾಚಿಗಳು, 14 ಯಾಂತ್ರೀಕೃತ ದೋಣಿಗಳು, 6 ಟ್ರ್ಯಾಕ್ಟರ್‌ಗಳು ಹಾಗೂ ಒಂದು ಜೆಸಿಬಿಯನ್ನು ಜಪ್ತಿ ಮಾಡಲಾಗಿದೆ.

ಇದೀಗ ಅಕ್ರಮ ತಡೆಯಬೇಕಿದ್ದ ಕೆಲ ಅಧಿಕಾರಿಗಳ ಮೇಲೆಯೂ ಲೋಕಾಯುಕ್ತರ ಕಣ್ಣು ಬಿದ್ದಿದೆ. ಜಿಲ್ಲಾಧಿಕಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಕೆಲವು ತಹಶೀಲ್ದಾರರ ವಿರುದ್ಧವೂ ದೂರು ದಾಖಲಾಗಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಮರಳು ಮಾಫಿಯಾದ ವಿರುದ್ಧ ನಡೆದ ಈ ಮೆಗಾ ದಾಳಿ ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದ ಕ್ರಮ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

About The Author