ಪೆಟ್ರೋಲ್ ರೇಟ್ ಕೇಳಿದ್ರೆ ತಲಿ ಗಿರ್ ಅಂತೆತ್ರಿ!

ಇಂಧನ ದರ ಏರಿಕೆ ಸಾಮಾನ್ಯ ಜನರ ಜೇಬಿಗೆ ಮತ್ತೊಮ್ಮೆ ಭಾರೀ ಹೊಡೆತ ಬಿದ್ದಿದೆ. ಕೇವಲ ಹತ್ತು ದಿನಗಳ ಅವಧಿಯಲ್ಲಿ ಮೂರನೇ ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳವಾಗಿದ್ದು, ಜನರಲ್ಲಿ ತೀವ್ರ ಆತಂಕ ಮತ್ತು ಅಸಮಾಧಾನ ವ್ಯಕ್ತವಾಗಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಇಂದು ಇಂಧನ ದರದಲ್ಲಿ ತಲಾ 94 ಪೈಸೆ ಏರಿಕೆ ದಾಖಲಾಗಿದೆ. ಹೊಸ ದರಗಳ ಪ್ರಕಾರ ಪೆಟ್ರೋಲ್ ಲೀಟರ್‌ಗೆ ₹107.87 ತಲುಪಿದ್ದರೆ, ಡೀಸೆಲ್ ದರ ₹95.84ಕ್ಕೆ ಏರಿಕೆಯಾಗಿದೆ. ದಿನದಿಂದ ದಿನಕ್ಕೆ ನಡೆಯುತ್ತಿರುವ ಈ ಏರಿಕೆ ವಾಹನ ಸವಾರರಿಗೆ ನೇರ ಹೊರೆ ತಂದಿದೆ.

ಕಳೆದ ಹತ್ತು ದಿನಗಳಲ್ಲಿ ನಿರಂತರವಾಗಿ ಮೂರು ಬಾರಿ ಬೆಲೆ ಹೆಚ್ಚಳವಾಗಿರುವುದರಿಂದ ಕಾರ್ಮಿಕರು, ವ್ಯಾಪಾರಿಗಳು ಹಾಗೂ ಮಧ್ಯಮ ವರ್ಗದ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗಾಗಲೇ ದಿನಬಳಕೆ ವಸ್ತುಗಳು, ವಿದ್ಯುತ್ ಹಾಗೂ ಸಾರಿಗೆ ಖರ್ಚು ಹೆಚ್ಚಿರುವ ಸಂದರ್ಭದಲ್ಲಿ ಇಂಧನ ದರ ಏರಿಕೆ ಜನರ ತಿಂಗಳ ಬಜೆಟ್‌ನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ.

ಇಂಧನ ದರ ಏರಿಕೆಯ ಪರಿಣಾಮ ಕೇವಲ ಪೆಟ್ರೋಲ್ ಬಂಕ್‌ಗಷ್ಟೇ ಸೀಮಿತವಾಗಿಲ್ಲ. ಸಾರಿಗೆ ವೆಚ್ಚ, ಸರಕು ಸಾಗಣೆ ಹಾಗೂ ಅಗತ್ಯ ವಸ್ತುಗಳ ಬೆಲೆಗಳ ಮೇಲೂ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಜೀವನದ ಭಾರ ಜನರ ಮೇಲೆ ಬೀಳುವ ಆತಂಕವೂ ವ್ಯಕ್ತವಾಗಿದೆ.

ನಿರಂತರ ಬೆಲೆ ಏರಿಕೆಯಿಂದ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಇಂಧನ ದರವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.

About The Author