ಬಿಲ್ ಕಟ್ಟದಿದ್ರೆ ಕಟ್ ಮಾಡ್ತೀರಿ, ಕರೆಂಟ್ ಕೊಡೋಕೆ ಏನಾಗೈತಿ?

ಧಾರವಾಡ ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರ ಸಹನೆ ಮೀರಿದೆ. ಮಳೆ-ಗಾಳಿ ಇಲ್ಲದ ಸಮಯದಲ್ಲೂ ಪದೇಪದೇ ಲೈಟ್ ಕಡಿತವಾಗುತ್ತಿರುವುದರಿಂದ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ 15 ದಿನಗಳಿಂದ ನಿರಂತರವಾಗಿ ವಿದ್ಯುತ್ ಪೂರೈಕೆ ವ್ಯತ್ಯಯವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. “ಹತ್ತು ನಿಮಿಷ ಬಂದರೆ ಅರ್ಧ ಗಂಟೆ ಕಟ್” ಎಂಬ ಸ್ಥಿತಿ ನಿರ್ಮಾಣವಾಗಿದ್ದು, ದಿನನಿತ್ಯದ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹಗಲು ಮಾತ್ರವಲ್ಲ, ರಾತ್ರಿ ವೇಳೆಯಲ್ಲೂ ವಿದ್ಯುತ್ ಕಡಿತವಾಗುತ್ತಿರುವುದರಿಂದ ಜನರಿಗೆ ನಿದ್ದೆಗೂ ತೊಂದರೆ ಉಂಟಾಗಿದೆ.
ಮನೆಗಳಲ್ಲಿ ಅಡುಗೆ, ನೀರಿನ ವ್ಯವಸ್ಥೆ ಸೇರಿದಂತೆ ದೈನಂದಿನ ಕೆಲಸಗಳು ನಿಂತುಹೋಗಿವೆ. ವಿದ್ಯಾರ್ಥಿಗಳ ಓದು ಹಿನ್ನಡೆಯಾಗುತ್ತಿದ್ದು, ಪರೀಕ್ಷೆ ತಯಾರಿಯಲ್ಲಿರುವವರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹಿರಿಯ ನಾಗರಿಕರು ಹಾಗೂ ರೋಗಿಗಳಿಗೂ ವಿದ್ಯುತ್ ವ್ಯತ್ಯಯದಿಂದ ಸಮಸ್ಯೆ ಎದುರಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಇದರ ಪರಿಣಾಮ ಸಣ್ಣ ಕೈಗಾರಿಕೆಗಳ ಮೇಲೂ ಇದರ ಪರಿಣಾಮ ಬೀರುತ್ತಿದೆ. ಉತ್ಪಾದನೆ ಮುಂದುವರಿಸಲು ಉದ್ಯಮಿಗಳು ಜನರೇಟರ್‌ಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ಹೆಚ್ಚುವರಿ ವೆಚ್ಚ ಹೆಚ್ಚಾಗಿ ವ್ಯಾಪಾರಿಗಳಿಗೆ ಆರ್ಥಿಕ ಒತ್ತಡ ಹೆಚ್ಚುತ್ತಿದೆ ಎಂದು ಕೈಗಾರಿಕೋದ್ಯಮಿಗಳು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯಕ್ಕೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಹೆಸ್ಕಾಂ ಅಧಿಕಾರಿಗಳು ತಕ್ಷಣ ಸ್ಪಷ್ಟನೆ ನೀಡಬೇಕು ಹಾಗೂ ಶಾಶ್ವತ ಪರಿಹಾರ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಇದೀಗ ಪ್ರಮುಖ ಚರ್ಚೆಯ ವಿಷಯವಾಗಿ ಪರಿಣಮಿಸಿದೆ.

About The Author