ಕುರ್ಚಿ ಬಿಡುವ ಕೊನೆಯ ಕ್ಷಣದಲ್ಲೂ ಸಿದ್ದರಾಮಯ್ಯ ಓಲೈಕೆ ರಾಜಕಾರಣ ಮುಂದುವರಿಸಿದ್ದಾರೆ: ಆರ್.ಅಶೋಕ್

Political News: ಸಿಎಂ ಸಿದ್ದರಾಮಯ್ಯ ಇಂದು ಸಂಜೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಈಗಾಗಲೇ ಹೇಳಿದ್ದಾರೆ. ಇದೀಗ ಆರ್.ಅಶೋಕ್ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದು, ಕುರ್ಚಿ ಬಿಡುವ ಕೊನೆಯ ಕ್ಷಣದಲ್ಲೂ ಸಿದ್ದರಾಮಯ್ಯ ಓಲೈಕೆ ರಾಜಕಾರಣ ಮುಂದುವರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾತಿಗಣತಿ ವರದಿ ಕುರಿತು ಮಾತನಾಡಿರುವ ಆರ್.ಅಶೋಕ್, ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ, ಸಿದ್ದರಾಮಯ್ಯ ಅವರಿಗೆ ತಮ್ಮ ಕುರ್ಚಿಗೆ ಕಂಟಕ ಬಂದಾಗಲೆಲ್ಲಾ “ಜಾತಿ ಜನಗಣತಿ ವರದಿ” ಎಂಬ ಮಂಕುಬೂದಿ ಎರಚಿ ಜನರ ಅನುಕಂಪ ಗಳಿಸುವ ಕುತಂತ್ರ ಈಗ ಯಾರಿಗೂ ಗುಟ್ಟಾಗಿ ಉಳಿದಿಲ್ಲ.

ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾದ ಕ್ಷಣದಲ್ಲಿ, ಅಧಿಕಾರದ ಕೊನೆಯ ದಿನಗಳಲ್ಲಿ ತರಾತುರಿಯಲ್ಲಿ ಜಾತಿ ಜನಗಣತಿ ವರದಿ ಸ್ವೀಕರಿಸುವುದು, ಅದರ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುವುದು – ಇದನ್ನು ಆಷಾಢಭೂತಿತನ, ರಾಜಕೀಯ ಬೂಟಾಟಿಕೆ ಅನ್ನದೇ ಇನ್ನೇನು ಹೇಳಲು ಸಾಧ್ಯ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ನಿಮ್ಮ ಆಡಳಿತ ವಿಫಲವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇಲ್ಲ. ಸರ್ಕಾರದ ವಿರುದ್ಧ ಸ್ಪಷ್ಟ ಆಡಳಿತ ವಿರೋಧಿ ಅಲೆ ಇದೆ. ಹೈಕಮಾಂಡ್ ಬಳಿ ಛೀಮಾರಿ ಹಾಕಿಸಿಕೊಂಡು ಒಲ್ಲದ ಮನಸ್ಸಿನಿಂದ ರಾಜೀನಾಮೆ ಕಡೆಗೆ ಸಾಗುತ್ತಿರುವ ಸಿದ್ದರಾಮಯ್ಯನವರು, ಕನಿಷ್ಠ ಈಗಲಾದರೂ ತಮ್ಮ ತುಷ್ಟೀಕರಣ ರಾಜಕಾರಣ ಮತ್ತು ಡೋಂಗಿ ಸಮಾಜವಾದದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ, ಪಶ್ಚಾತಾಪ ಪಡುತ್ತಾರೆ ಎಂದು ಭಾವಿಸಿದ್ದೆ.

ಆದರೆ ಕುರ್ಚಿ ಬಿಡುವ ಕೊನೆಯ ಕ್ಷಣದಲ್ಲೂ ಕೂಡ ಓಲೈಕೆ ರಾಜಕಾರಣ ಮುಂದುವರಿಸಿ ತಮ್ಮ ಭಂಡತನವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಮೊದಲನೆಯದಾಗಿ, ಇಷ್ಟು ದೊಡ್ಡ ಪ್ರಮಾಣದ ದತ್ತಾಂಶವನ್ನು ಕೇವಲ ಕೆಲ ಗಂಟೆಗಳಲ್ಲಿ ಸಂಸ್ಕರಿಸಿ ಅಂತಿಮ ವರದಿ ರೂಪಿಸುವುದು ಅಸಾಧ್ಯ. ಇದಕ್ಕಾಗಿಯೇ ದೆಹಲಿ ಭೇಟಿಯಲ್ಲಿ ಹೈಕಮಾಂಡ್ ಮುಂದೆ ಸ್ವತಃ ಮುಖ್ಯಮಂತ್ರಿಗಳೇ 15 ದಿನಗಳ ಕಾಲಾವಕಾಶ ಕೇಳಿದ್ದಾರೆ ಎಂಬ ಸುದ್ದಿಗಳಿದ್ದವು. ಹಾಗಿದ್ದಾಗ ಕೇವಲ 24 ಗಂಟೆಗಳಲ್ಲಿ ವರದಿ ಸ್ವೀಕಾರ ಸಾಧ್ಯವೆ? ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಎರಡನೆಯದಾಗಿ, ಕೇಂದ್ರ ಸರ್ಕಾರ ಈಗಾಗಲೇ ದಶವಾರ್ಷಿಕ ಜನಗಣತಿಯಲ್ಲಿ ದೇಶವ್ಯಾಪಿ ಜಾತಿ ಜನಗಣತಿ ನಡೆಸುವುದಾಗಿ ಘೋಷಿಸಿದ್ದು, ಅದರ ಪ್ರಕ್ರಿಯೆಯೂ ಆರಂಭವಾಗಿದೆ. ಆದರೂ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಕನ್ನಡಿಗರ ತೆರಿಗೆ ಹಣವನ್ನು ಪೋಲು ಮಾಡಿ, ತರಾತುರಿಯಲ್ಲಿ ವರದಿ ಸ್ವೀಕರಿಸಿ ಅದನ್ನು ಸೋರಿಕೆ ಮಾಡುವ ಮೂಲಕ ಸಮಾಜದಲ್ಲಿ ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವ ಅಪಾಯಕಾರಿ ರಾಜಕಾರಣಕ್ಕೆ ಕೈ ಹಾಕಿದ್ದಾರೆ ಎಂದು ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜೀನಾಮೆ ಕೊಡುವ ಹೊಸ್ತಿಲಲ್ಲೂ ತಮ್ಮ ಒಣ ಪ್ರತಿಷ್ಠೆ ಮತ್ತು ಸ್ವಹಿತಾಸಕ್ತಿ ಬಿಡದ ಸಿದ್ದರಾಮಯ್ಯನವರ ಸಣ್ಣತನ ಹಾಗೂ ಕೀಳು ಮಟ್ಟದ ರಾಜಕಾರಣ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಆರ್.ಅಶೋಕ್ ಹೇಳಿದ್ದಾರೆ.

About The Author