Hubli News: ಹುಬ್ಬಳ್ಳಿಯಲ್ಲಿ ಕ್ಷುಲಕ ವಿಚಾರಕ್ಕೆ ಆರಂಭವಾದ ಜಗಳ ಮಾರಣಾಂತಿಕ ಹಲ್ಲೆಗೆ ತಿರುಗಿದೆ. ಕಾರ್ ಸೈಡ್ ವಿಚಾರಕ್ಕೆ ಯುವಕನನ್ನು ಮಧ್ಯರಸ್ತೆಯಲ್ಲೇ ಅಟ್ಟಾಡಿಸಿ ಹಲ್ಲೆ ನಡೆಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಹುಬ್ಬಳ್ಳಿಯ ಲಿಂಗರಾಜನಗರದಲ್ಲಿ ಕಾರ್ ಸೈಡ್ ವಿಚಾರಕ್ಕೆ ಮಾತಿನ ಚಕಮಕಿ ಆರಂಭವಾಗಿ, ಕ್ಷಣಾರ್ಧದಲ್ಲೇ ಜಗಳ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಾರು ಮೈಮೇಲೆ ತಂದಿದ್ದಾನೆ ಎಂದು ಆರೋಪಿಸಿ ಸೈಯದ್ ಬಿಜಾಪುರ ಮೇಲೆ ರಿಯಾಝ್, ರಾಜು ಹಾಗೂ ಮಂಜು ಸೇರಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಮಧ್ಯರಸ್ತೆಯಲ್ಲೇ ಯುವಕನನ್ನು ಅಟ್ಟಾಡಿಸಿ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲ್ಲೆಯಿಂದ ಗಾಯಗೊಂಡ ಯುವಕನನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ವಿದ್ಯಾನಗರ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಕೇವಲ ಎರಡು ಗಂಟೆಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸಣ್ಣ ವಿಚಾರಕ್ಕೂ ಕಾನೂನು ಕೈಗೆತ್ತಿಕೊಳ್ಳುತ್ತಿರುವ ಘಟನೆಗಳ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
Sangamesh Sattigeri, Karnataka TV, Hubballi




