Dharwad News: ಧಾರವಾಡ ಜಿಲ್ಲೆಯಿಂದ ಸಚಿವ ಸ್ಥಾನ ಯಾರಿಗೆ? ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ

Dharwad News: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಿದ್ದು, ನಾಳೆ D. K. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರ ಬೆನ್ನಲ್ಲೇ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ನಾಯಕರ ಬಗ್ಗೆ ರಾಜ್ಯಾದ್ಯಂತ ಚರ್ಚೆ ಜೋರಾಗಿದೆ. ಅದರಲ್ಲೂ ಧಾರವಾಡ ಜಿಲ್ಲೆಯಿಂದ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಸಚಿವರಾಗಿ ಅನುಭವ ಹೊಂದಿರುವ ಸಂತೋಷ್ ಲಾಡ್ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಪ್ರಸಾದ್ ಅಬ್ಬಯ್ಯ , ರೈತ ಹಾಗೂ ಮಹದಾಯಿ ಹೋರಾಟಗಳ ಮೂಲಕ ಗುರುತಿಸಿಕೊಂಡಿರುವ N. H. ಕೊಣರೆಡ್ಡಿ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಮ್ ಅಹ್ಮದ್ ಅವರ ಹೆಸರುಗಳು ಸಚಿವ ಸ್ಥಾನದ ರೇಸ್‌ನಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿವೆ.

ಸಂತೋಷ್ ಲಾಡ್ ಅವರ ಅನುಭವ, ಪ್ರಸಾದ ಅಬ್ಬಯ್ಯ ಅವರ ಹ್ಯಾಟ್ರಿಕ್ ಗೆಲುವು, ಕೋನರೆಡ್ಡಿ ಅವರ ರೈತಪರ ಹೋರಾಟ ಹಾಗೂ ಸಲೀಂ ಅಹ್ಮದ್ ಅವರ ಪಕ್ಷ ಸಂಘಟನೆಯ ಕಾರ್ಯಗಳು ಸಚಿವ ಸ್ಥಾನದ ಚರ್ಚೆಗೆ ಮತ್ತಷ್ಟು ಬಲ ತುಂಬಿವೆ. ಈ ನಾಲ್ವರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬುದರ ಬಗ್ಗೆ ರಾಜಕೀಯ ವಲಯದಲ್ಲಿ ಲೆಕ್ಕಾಚಾರಗಳು ಜೋರಾಗಿವೆ.

ಧಾರವಾಡ ಜಿಲ್ಲೆಗೆ ಒಂದು ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದ್ದು, ಹೈಕಮಾಂಡ್ ಯಾವ ಮಾನದಂಡದ ಆಧಾರದ ಮೇಲೆ ಆಯ್ಕೆ ಮಾಡಲಿದೆ ಎಂಬ ಕುತೂಹಲವೂ ಮೂಡಿದೆ. ಕಾರ್ಯಕರ್ತರು ಹಾಗೂ ಬೆಂಬಲಿಗರು ತಮ್ಮ ನಾಯಕರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಡ ಹೇರಿದ್ದಾರೆ.

ಒಟ್ಟಾರೆ ನಾಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಯಾರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದರ ಬಗ್ಗೆ ರಾಜ್ಯದ ಜನರ ಜೊತೆಗೆ ಧಾರವಾಡ ಜಿಲ್ಲೆಯ ಜನರ ಕುತೂಹಲವೂ ಹೆಚ್ಚಾಗಿದೆ. ಜಿಲ್ಲೆಯಿಂದ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದಕ್ಕೆ ನಾಳೆಯೇ ಉತ್ತರ ಸಿಗಲಿದೆ.

ಕ್ಯಾಮೆರ ಪರ್ಸನ್ ಹೇಮಂತ್ ಜೊತೆ ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

About The Author