Bengaluru News: ಮದುವೆಯಾಗದ ಯುವಕ-ಯುವತಿಯರಿಗಾಗಿ ಇರುವ ವೆಬ್ಸೈಟ್ಗಳೇ ಮ್ಯಾಟ್ರಿಮೋನಿ ವೆಬ್ಸೈಟ್ಗಳು. ಚೆಂದದ, ಸುಶಿಕ್ಷಿತ ಹೆಣ್ಣಿಗಾಗಿ ಗಂಡು ಮಕ್ಕಳು ಹುಡುಕಿದರೆ, ಉತ್ತಮ ಸಂಬಳವಿರುವ, ನೋಡಲು ಆಕರ್ಷಕವಾಗಿರುವ, ಅನುಕೂಲಕರವಾಗಿರುವ ಪುರುಷರಿಗಾಗಿ ಹೆಣ್ಣು ಮಕ್ಕಳು ಇಲ್ಲಿ ಸರ್ಚ್ ಮಾಡ್ತಾರೆ.
ಆದರೆ ಇಂಥ ವೆಬ್ಸೈಟ್ನಲ್ಲಿ ವಿವಾಹವಾಗಿ ನೆಮ್ಮದಿಯಾಗಿರುವವರಿಗಿಂತ, ಮೋಸ ಹೋಗಿ, ಮದುವೆಯ ಗೋಳೆ ಬೇಡಾ ಅಂತಾ ಓಡಿರುವವರೇ ಹೆಚ್ಚು. ಇದೀಗ ಇಂಥದ್ದೇ ಕೇಸ್ ಕಂಡುಬಂದಿದ್ದು, ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ಸಿಕ್ಕ ಹೆಣ್ಣು ಮದುವೆಯಾಗುತ್ತೇನೆ ಎಂದು ನಂಬಿಸಿ, ಬೆಂಗಳೂರಿನ ಯುವಕನಿಂದ 35 ಲಕ್ಷಕ್ಕೂ ಹೆಚ್ಚು ಹಣ ಪೀಕಿ, ಎಸ್ಕೇಪ್ ಆಗಿದ್ದಾಳೆ.
ಬೆಂಗಳೂರಿನ ಮಡಿವಾಳ ನಿವಾಸಿಯಾಗಿರುವ ಅನಿಲ್ ಕುಮಾರ್ ಸಾಗಿನಲಾ ಎಂಬುವವರು ಮೋಸ ಹೋಗಿದ್ದು, ಇವರು ಮದುವೆಯಾಗಲು ವೆಬ್ಸೈಟ್ನಲ್ಲಿ ಹೆಣ್ಣು ಹುಡುಕುತ್ತಿದ್ದರು. ಅವರ ನಂಬರ್ ಕೂಡ ಹಾಕಿದ್ದರು. ಇದನ್ನು ಕಂಡ ಲಕ್ಷ್ಮೀ ಎಂಬ ಯುವತಿ, ಇವರ ನಂಬರ್ಗೆ ಕಾಲ್ ಮಾಡಿ, ಪರಿಚಯ ಮಾಡಿಕೊಂಡು, ತಾನು ನಿಮ್ಮನ್ನು ಮದುವೆಯಾಗಲು ಇಚ್ಛಿಸುತ್ತೇನೆ ಎಂದಿದ್ದಾಳೆ.
ಅಂತೂ ಇಂತೂ ಹೆಣ್ಣು ಸಿಕ್ಕಳು ಅಂತಾ ಖುಷಿಯಾದ ಅನಿಲ್ ಕುಮಾರ್ ಕೂಡ ಮದುವೆಗೆ ಒಪ್ಪಿದ್ದಾನೆ. ಮಾತುಕತೆ ಹೀಗೆ ಮುಂದುವರೆದಿದೆ. ಬಳಿಕ ಲಕ್ಷ್ಮೀ ತಾನು ಹೂಡಿಕೆ ಮಾಡುತ್ತಿದ್ದೇನೆ, ನೀವೂ ಹೂಡಿಕೆ ಮಾಡಿ, ನಮ್ಮಿಬ್ಬರ ಭವಿಷ್ಯ ಉತ್ತಮವಾಗಿರುತ್ತದೆ ಅಂತೆಲ್ಲ ಹೇಳಿ, ಅನಿಲ್ಗೆ ಆಸೆ ತೋರ್ಸಿದ್ದಾಳೆ. ಆಕೆಯ ಒತ್ತಾಯಕ್ಕೆ ಅನಿಲ್ 60 ಸಾವಿರ ನೀಡಿದ್ದಾನೆ.
ಅದನ್ನು ಆಕೆ ಹೂಡಿಕೆ ಮಾಡಿದ್ದೇನೆ ಎಂದು ಹೇಳಿ, ಲಾಭ ಬಂದಿದೆ ಅಂತೆಲ್ಲಾ ರೀಲ್ ಬಿಟ್ಟು, ಅನಿಲ್ ಲೋನ್ ಮಾಡಿ 35 ಲಕ್ಷ ಹೂಡಿಕೆ ಮಾಡುವಂತೆ ಮಾಡಿದ್ದಾಳೆ. ಅನಿಲ್ ಕೂಡ ಲಕ್ಷ್ಮೀ ಮೇಲೆ ನಂಬಿಕೆ ಇಟ್ಟು, ಭವಿಷ್ಯ ಚೆನ್ನಾಗಿರುತ್ತದೆ ಎಂಬ ಆಸೆಯಲ್ಲಿ ಲೋನ್ ಮಾಡಿ ಲಕ್ಷ ಲಕ್ಷ ಹಣ ಹೂಡಿಕೆ ಮಾಡಿದ್ದಾನೆ. ಅದರ ಮರುದಿನವೇ ಲಕ್ಷ್ಮೀ ಫೋನ್ ಸ್ವಿಚ್ ಆಫ್ ಆಗಿದೆ. ಅಲ್ಲದೇ, ಹೂಡಿಕೆ ಮಾಡಿದ ಅಕೌಂಡ್ ಕೂಡ ಡಿಆ್ಯಕ್ಟೀವೇಟ್ ಆಗಿದೆ. ಅಲ್ಲಿಗೆ ತಾನು ಮೋಸ ಹೋಗಿದ್ದೇನೆ ಎಂಬ ಅರಿವು ಅನಿಲ್ಗಾಗಿದೆ.
ತಕ್ಷಣ ಅನಿಲ್ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ದೂರು ದಾಖಲಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.




