Hubli News: ವಿಶ್ವ ರಕ್ತದಾನ ದಿನ ಹಾಗೂ ದೇಶದ ಯೋಧ ಮತ್ತು ಸಮಾಜಸೇವಕರಾದ ಪರಶುರಾಮ್ ದಿವಾನದ ಅವರ ಜನ್ಮದಿನದ ಅಂಗವಾಗಿ ಶಿರುಗುಪ್ಪಿಯಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಯಿತು. ನೂರಾರು ಯುವಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದರು.
ವಿಶ್ವ ರಕ್ತದಾನ ದಿನದ ಅಂಗವಾಗಿ ಹಾಗೂ ದೇಶದ ಯೋಧ ಮತ್ತು ಸಮಾಜಸೇವಕರಾದ ಪರಶುರಾಮ್ ದಿವಾನದ ಅವರ ಜನ್ಮದಿನದ ಪ್ರಯುಕ್ತ ಶಿರುಗುಪ್ಪಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಪರಶುರಾಮ್ ಯೂತ್ ಬ್ರಿಗೇಡ್ ಮತ್ತು ಕಿಮ್ಸ್ ರಕ್ತ ಬಂಡಾರದ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಶಿಬಿರದಲ್ಲಿ ನೂರಾರು ಯುವಕರು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿದರು.
ದೇಶದ ಗಡಿಯಲ್ಲಿ ಸೇವೆ ಸಲ್ಲಿಸುವ ಯೋಧನ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮಕ್ಕೆ ಯುವಜನತೆಯಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ಸಮಾಜಮುಖಿ ಕಾರ್ಯಗಳಿಗೆ ಯುವಕರು ಕೈಜೋಡಿಸಿರುವುದು ಸಂತಸದ ಸಂಗತಿ ಎಂದು ಸಂಘಟಕರು ಅಭಿಪ್ರಾಯಪಟ್ಟರು.
ಶಿಬಿರದಲ್ಲಿ ಕಿಮ್ಸ್ ರಕ್ತ ಬಂಡಾರದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ರಕ್ತ ಸಂಗ್ರಹಣಾ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು. ರಕ್ತದಾನದ ಮೂಲಕ ಜೀವ ಉಳಿಸುವ ಮಹತ್ವದ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ದಾನಿಗಳಿಗೆ ಪರಶುರಾಮ್ ಯೂತ್ ಬ್ರಿಗೇಡ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಗಣ್ಯರು, ಸಂಘಟನೆಯ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಹೆಚ್ಚಿನ ಸಂಖ್ಯೆಯ ಯುವಕರು ಉಪಸ್ಥಿತರಿದ್ದರು.




