Hubli News: ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪ್ರಮಾಣಪತ್ರಕ್ಕೆ ಒಂದು ಬಾರಿ ವಿನಾಯಿತಿ

Hubli News: ಮೇ 31, 2026ರೊಳಗೆ ಪೂರ್ಣಗೊಂಡಿರುವ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಒಂದು ಬಾರಿಯ ಕ್ರಮವಾಗಿ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಸಲ್ಲಿಕೆಯಿಂದ ವಿನಾಯಿತಿ ನೀಡಲಾಗಿದ್ದು, ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಹೆಸ್ಕಾಂ ಮನವಿ ಮಾಡಿದೆ.

ಮೇ 31, 2026ರೊಳಗೆ ಪೂರ್ಣಗೊಂಡಿರುವ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ನೀಡಲು ರಾಜ್ಯ ಸರ್ಕಾರ ವಿಶೇಷ ವಿನಾಯಿತಿ ಘೋಷಿಸಿದೆ. ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವವರು, ತಾತ್ಕಾಲಿಕ ಸಂಪರ್ಕ ಪಡೆದಿರುವವರು ಹಾಗೂ ಇನ್ನೂ ಯಾವುದೇ ವಿದ್ಯುತ್ ಸಂಪರ್ಕ ಪಡೆಯದಿರುವ ಪೂರ್ಣಗೊಂಡ ಕಟ್ಟಡಗಳ ಮಾಲೀಕರಿಗೂ ಈ ಆದೇಶ ಅನ್ವಯವಾಗಲಿದೆ.

ಹೆಸ್ಕಾಂ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2,400 ಚದರ ಅಡಿವರೆಗಿನ ನಿವೇಶನಗಳಲ್ಲಿ ನಿರ್ಮಿಸಿರುವ ಜಿ+3 ಅಥವಾ ಸ್ಟಿಲ್ಟ್ ಪಾರ್ಕಿಂಗ್ ಸೇರಿದಂತೆ ನಾಲ್ಕು ಮಹಡಿಗಳ ವಸತಿ ಕಟ್ಟಡಗಳಿಗೆ ಈ ವಿನಾಯಿತಿ ನೀಡಲಾಗಿದೆ.

ಸರ್ಕಾರದ ಆದೇಶ ಹೊರಬಂದ ದಿನಾಂಕದಿಂದ 15 ದಿನಗಳೊಳಗೆ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದರೆ, ಒಂದು ಬಾರಿಯ ಕ್ರಮವಾಗಿ ಒಸಿ ಪ್ರಮಾಣಪತ್ರ ಸಲ್ಲಿಸುವುದರಿಂದ ವಿನಾಯಿತಿ ದೊರೆಯಲಿದೆ.

ಇದೇ ವೇಳೆ ಗ್ರಾಮೀಣ ಪ್ರದೇಶಗಳ ರೈತರ ವಾಸದ ಮನೆ, ತೋಟದ ಮನೆ, ಕೃಷಿ ಉಪಕರಣಗಳ ಕೊಠಡಿ, ದನದ ಕೊಟ್ಟಿಗೆ ಹಾಗೂ ರೇಷ್ಮೆ ಗೂಡಿನ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂದರ್ಭದಲ್ಲೂ ಒಸಿ ಪ್ರಮಾಣಪತ್ರದಿಂದ ವಿನಾಯಿತಿ ನೀಡಲಾಗಿದೆ.

ಹೆಚ್ಚಿನ ಮಾಹಿತಿ ಹಾಗೂ ಸ್ಪಷ್ಟೀಕರಣಕ್ಕಾಗಿ ಗ್ರಾಹಕರು ತಮ್ಮ ವ್ಯಾಪ್ತಿಯ ಹೆಸ್ಕಾಂ ಉಪವಿಭಾಗ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

About The Author