ಪೊಲೀಸ್ ಠಾಣೆಗಳು ಕಾಂಗ್ರೆಸ್ ಪಕ್ಷದ ಕಚೇರಿಗಳಾಗಿವೆ, ಪೊಲೀಸರು ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ: ವಿಜಯೇಂದ್ರ

Haveri News: ಹಾವೇರಿ: ನಿನ್ನೆ ಕಾರಹುಣ್ೞಿಮೆ ಸಂಭ್ರಮದ ಮಧ್ಯೆ ಹಾವೇರಿಯಲ್ಲಿ ಕೋಮು ಗಲಭೆ ನಡೆದಿದ್ದು, ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯಂದ್ರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ವಿಜಯೇಂದ್ರ, ಹಿಂದೂಗಳ ಮೇಲೆ ನಡೆದಿರುವುದು ಮಾರಣಾಂತಿಕವಾದ ಹಲ್ಲೆ. ಕಾರ ಹುಣ್ಣಿಮೆ ವೇಳೆ ಹೋರಿ ಬೆದರಿಸಿ ಪಟಾಕಿ ಸಿಡಿಸಿದ್ದಕ್ಕೆ ಹಲ್ಲೆ ಆಗಿದೆ. ಒಂದು ಕೋಮಿನ ದೇಶದ್ರೋಹಿಗಳು ಹಿಂದೂಗಳ ಮೇಲೆ ದಾಳಿ ಮಾಡಿದ್ದಾರೆ. ಹಿಂದೂಗಳನ್ನು ಬೆದರಿಸುವ ಷಡ್ಯಂತ್ರ ಈ ಭಾಗದಲ್ಲಿ ನಡೆಯುತ್ತಿದೆ. ಪೊಲೀಸರು ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಪೊಲೀಸ್ ಠಾಣೆಗಳು ಕಾಂಗ್ರೆಸ್ ಪಕ್ಷದ ಕಚೇರಿಗಳಾಗಿವೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.

ಹಿಂದೂಗಳು ಶಾಂತಿಯುತವಾಗಿ ಹಬ್ಬ ಆಚರಿಸುವ ಹಕ್ಕೂ ಇಲ್ಲದಂತಾಗಿದೆ. ನಾವು ಪಾಕಿಸ್ತಾನದಲ್ಲಿದ್ದೇವೋ, ಭಾರತದಲ್ಲಿದ್ದೇವೋ ಎಂಬ ಅನುಮಾನ ಬರುತ್ತಿದೆ. ಗೂಂಡಾಗಿರಿ ಮಾಡಿದವರನ್ನು ಒದ್ದು ಒಳಗೆ ಹಾಕುತ್ತೇನೆ ಎಂದಿದ್ದ ಸಿಎಂ, ಕ್ರಮ ಎಲ್ಲಿದೆ? ಘಟನೆ ನಡೆದು 24 ಗಂಟೆ ಕಳೆದರೂ ಆರೋಪಿಗಳ ವಿರುದ್ಧ ಕಠಿಣ ಕ್ರಮವಾಗಿಲ್ಲ. ಕೌಂಟರ್ ಕೇಸ್ ದಾಖಲಿಸಿ ಹಿಂದೂಗಳನ್ನೇ ಬೆದರಿಸುವ ಕೆಲಸ ನಡೆಯುತ್ತಿದೆ. ಹಿಂದೂ ಕಾರ್ಯಕರ್ತರ ಮೇಲೆ ಅನಾವಶ್ಯಕ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಪೊಲೀಸರ ಮೂಲಕ ಹಿಂದೂ ಸಮಾಜವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಕೂಡಲೇ ಆರೋಪಿಗಳ ಬಂಧನವಾಗದಿದ್ದರೆ ಜನರ ಆಕ್ರೋಶ ಸ್ಫೋಟಗೊಳ್ಳಲಿದೆ.

ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕು. ಹಿಂದೂಗಳ ಮೇಲೆ ದಾಖಲಿಸಿದ ಕೌಂಟರ್ ಕೇಸ್ ಹಿಂಪಡೆಯಬೇಕು. ಅಗತ್ಯವಿದ್ದರೆ ಠಾಣೆ ಮುತ್ತಿಗೆ ಹೋರಾಟ ನಡೆಸಲಾಗುವುದು. ಇದು ಏಟಿಗೆ ಏಟು ಕೊಡುವ ಪ್ರಶ್ನೆಯಲ್ಲ, ನ್ಯಾಯದ ಪ್ರಶ್ನೆಯಾಗಿದೆ. ಸರ್ಕಾರಕ್ಕೆ ಮಾನ-ಮರ್ಯಾದೆ ಇದ್ದರೆ ಕೂಡಲೇ ಕ್ರಮ ಕೈಗೊಳ್ಳಲಿ. ಸ್ಥಳೀಯ ಶಾಸಕರಿಗೂ ಹಿಂದೂಗಳ ರಕ್ಷಣೆ ಮಾಡುವ ಜವಾಬ್ದಾರಿ ಇದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

About The Author