Dharwad News: ಹೆಂಡತಿ ದಪ್ಪ ಇದ್ದಾಳೆ, ಗರ್ಭಧರಿಸುತ್ತಿಲ್ಲ ಎಂಬ ಕಾರಣಕ್ಕೆ ಪತಿಯೇ ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪ ಧಾರವಾಡ ಜಿಲ್ಲೆಯಲ್ಲಿ ಕೇಳಿಬಂದಿದೆ. ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ 29 ವರ್ಷದ ಪ್ರಿಯಾಂಕ ಕಮಲಾಕರ್ ಸಾವನ್ನಪ್ಪಿದ ಮಹಿಳೆ. 2024ರಲ್ಲಿ ಬಸವರಾಜ್ ವಡ್ಡರ್ ಎಂಬಾತನೊಂದಿಗೆ ವಿವಾಹವಾಗಿದ್ದ ಪ್ರಿಯಾಂಕ, ಮದುವೆಯಾದ ಬಳಿಕ ತವರು ಮನೆಯಿಂದ ಹಣ ಹಾಗೂ ಬಂಗಾರ ತರುವಂತೆ ನಿರಂತರ ಕಿರುಕುಳ ಎದುರಿಸುತ್ತಿದ್ದಳು ಎಂದು ಆರೋಪಿಸಲಾಗಿದೆ.
ಇದರ ಜೊತೆಗೆ, “ನೀನು ದಪ್ಪ ಇದ್ದೀಯ, ಗರ್ಭಿಣಿಯಾಗುವುದಿಲ್ಲ” ಎಂದು ಪತಿ ಬಸವರಾಜ್ ಪದೇಪದೇ ಅವಮಾನ ಮಾಡುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ದಂಪತಿ ನಡುವೆ ಕಲಹ ನಡೆಯುತ್ತಿದ್ದು, ಸೋಮವಾರ ರಾತ್ರಿ ಪತಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಘಟನೆ ಬಳಿಕ ಮಾಹಿತಿ ತಿಳಿದ ನವಲಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಆರೋಪಿ ಬಸವರಾಜ್ ವಡ್ಡರ್ ಸೇರಿದಂತೆ ರೇಣವ್ವ, ಸುಭಾಷ್ ಹಾಗೂ ಸಿದ್ದರಾಮೇಶ್ ಎಂಬ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಒಟ್ಟಾರೆ, ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ ಹಾಗೂ ದೈಹಿಕ ನಿಂದನೆ ಹಿನ್ನೆಲೆಯಲ್ಲೇ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಎಲ್ಲಾ ಆಯಾಮಗಳಲ್ಲೂ ನವಲಗುಂದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




