Hubli News: SIR-ಪಿಆರ್‌ಸಿ ಕುರಿತು ಮಹೇಶ್ ಟೆಂಗಿನಕಾಯಿ ವಾಗ್ದಾಳಿ

Hubli News: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಹಾಗೂ ರಾಜ್ಯ ಸರ್ಕಾರದ ಪರ್ಮನೆಂಟ್ ರೆಸಿಡೆನ್ಸಿ ಸರ್ಟಿಫಿಕೇಟ್ (PRC) ಸುತ್ತೋಲೆ ವಿಚಾರವಾಗಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಮಹೇಶ್ ಟೆಂಗಿನಕಾಯಿ, ಎಸ್‌ಐಆರ್ ಪ್ರಕ್ರಿಯೆಯನ್ನು ಕಾಂಗ್ರೆಸ್ ಮೊದಲು ವಿರೋಧಿಸಿತ್ತು. ಈಗ ಅದನ್ನೇ ಮ್ಯಾನಿಪುಲೇಟ್ ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು. ಮ್ಯಾಪಿಂಗ್ ಪ್ರಕ್ರಿಯೆಯಲ್ಲೂ ಅಕ್ರಮ ನಡೆದಿದ್ದು, ಕೆಲವೆಡೆ ಮಸೀದಿಗಳಲ್ಲೇ ಎನ್ಯೂಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದೆ ಎಂದು ದೂರಿದರು.

ಪೌರತ್ವ ನಿರ್ಧರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದ್ದು, ರಾಜ್ಯ ಸರ್ಕಾರಕ್ಕೆ ಇಲ್ಲ. ಆದರೂ ಅಕ್ರಮ ವಲಸಿಗರ ರಕ್ಷಣೆಗೆ ಮುಂದಾಗಿರುವಂತೆ ಪರ್ಮನೆಂಟ್ ರೆಸಿಡೆನ್ಸಿ ಸರ್ಟಿಫಿಕೇಟ್ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಟೆಂಗಿನಕಾಯಿ ಆರೋಪಿಸಿದರು. ಈ ಸುತ್ತೋಲೆಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಗೃಹ ಸಚಿವರು ಪ್ರತಿನಿತ್ಯ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವುದನ್ನು ಬಿಟ್ಟು, ರಾಜ್ಯದಲ್ಲಿರುವ ಅಕ್ರಮ ವಲಸಿಗರನ್ನು ಪತ್ತೆಹಚ್ಚುವ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿಯೂ ಇಲ್ಲದ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಜಾರಿಗೆ ತರುವುದು ಸರಿಯಲ್ಲ ಎಂದು ಟೀಕಿಸಿದರು.

ಒಟ್ಟಾರೆ, ಎಸ್‌ಐಆರ್ ಪ್ರಕ್ರಿಯೆ, ಪರ್ಮನೆಂಟ್ ರೆಸಿಡೆನ್ಸಿ ಸರ್ಟಿಫಿಕೇಟ್ ಹಾಗೂ ಅಕ್ರಮ ವಲಸಿಗರ ವಿಚಾರ ಮುಂದಿಟ್ಟು ಶಾಸಕ ಮಹೇಶ್ ಟೆಂಗಿನಕಾಯಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆರೋಪಗಳನ್ನು ಮಾಡಿದ್ದು, ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.

About The Author