ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಮಾತಿನಲ್ಲಿ ಅಲ್ಲ, ಕಾರ್ಯದಲ್ಲಿ ಸಾಬೀತುಪಡಿಸಿ: ಆರ್.ಅಶೋಕ್ ಸವಾಲ್

Political News: ಶಿವಾಜಿನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಜಿಬಿಎ (GBA) ಅಧಿಕಾರಿಯ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಬಗ್ಗೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಹಲ್ಲೆ ಅತ್ಯಂತ ಖಂಡನೀಯ ಎಂದಿದ್ದಾರೆ.

ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಅಧಿಕಾರಿಯ ಮೇಲೆಯೇ ಈ ರೀತಿಯ ಹಲ್ಲೆ ನಡೆಯುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ. ಬೆಂಗಳೂರಿನ ಬೇರೆ ಭಾಗಗಳಲ್ಲಿ ಒತ್ತುವರಿ ತೆರವು ವೇಳೆ ಕ್ಯಾಮೆರಾ ಮುಂದೆ ರೀಲ್ಸ್ ಮಾಡುವ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರೇ, ಈಗ ನಿಮ್ಮ ಮೌನ ಏಕೆ? ಅಧಿಕಾರಿಗಳ ಮೇಲೆ ಹಲ್ಲೆ ನಡೆದಾಗ ಅವರ ಬೆನ್ನಿಗೆ ನಿಲ್ಲುವ ಜವಾಬ್ದಾರಿ ನಿಮ್ಮದಲ್ಲವೇ? ಅಥವಾ ಇಲ್ಲಿ ನಿಮ್ಮ ಓಟ್‌ ಬ್ಯಾಂಕ್ ರಾಜಕೀಯವೇ ಕಾನೂನಿಗಿಂತ ದೊಡ್ಡದಾಗಿದೆಯೇ? ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಮಾನ್ಯ ಡಿ.ಕೆ.ಶಿವಕುಮಾರ್ ಅವರೇ, ಕಾನೂನು ಪಾಲನೆಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದರೂ ನಿಮ್ಮ ಸರ್ಕಾರ ಮೌನವಾಗಿರುವುದೇಕೆ? ಕಾನೂನು ಜಾರಿಗಿಂತ ರಾಜಕೀಯ ಲೆಕ್ಕಾಚಾರವೇ ನಿಮಗೆ ಮುಖ್ಯವೇ? ಇಂತಹ ಪ್ರಕರಣಗಳಲ್ಲಿ ಸರ್ಕಾರದ ಮೌನವೇ ದುಷ್ಕರ್ಮಿಗಳಿಗೆ ಪರೋಕ್ಷ ರಕ್ಷಣೆ ನೀಡಿದಂತಾಗುವುದಿಲ್ಲವೇ?

ಶಿವಾಜಿನಗರದಲ್ಲಿ ಒತ್ತುವರಿ ತೆರವು ಮಾಡಲು ಸರ್ಕಾರಕ್ಕೆ ಧೈರ್ಯವಿಲ್ಲವೇ? ಅಥವಾ ಕೆಲವು ಪ್ರದೇಶಗಳಿಗೆ ಮಾತ್ರ ಕಾನೂನು ಅನ್ವಯಿಸುವುದಿಲ್ಲವೇ? ರಾಜ್ಯದಲ್ಲಿ ಎರಡು ರೀತಿಯ ಕಾನೂನು ಜಾರಿಯೇ? ದೋಷಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಸುರಕ್ಷತೆಯನ್ನು ಖಚಿತಪಡಿಸಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಮಾತಿನಲ್ಲಿ ಅಲ್ಲ, ಕಾರ್ಯದಲ್ಲಿ ಸಾಬೀತುಪಡಿಸಿ ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.

About The Author