ಇಡೀ ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ದೊಡ್ಡ ಮಟ್ಟಕ್ಕೆ ಸೌಂಡ್ ಮಾಡಿದ್ದ ಪ್ರಸಿದ್ಧ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹ ಕೊನೆಗೂ ಮುಕ್ತಾಯಗೊಂಡಿದೆ. ನಡುರಾತ್ರಿ ಆಸ್ಪತ್ರೆಯ ಐಸಿಯುನಲ್ಲಿ ನಡೆದ ಕೇವಲ 10 ನಿಮಿಷಗಳ ಗೌಪ್ಯ ಸಭೆಯು ಇಡೀ ಹೋರಾಟದ ದಿಕ್ಕನ್ನೇ ಬದಲಿಸಿದೆ. ಕೊನೆಗೆ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರ ಕೈಯಿಂದ ಜ್ಯೂಸ್ ಕುಡಿಯುವ ಮೂಲಕ ವಾಂಗ್ಚುಕ್ ತಮ್ಮ ಸತ್ಯಾಗ್ರಹವನ್ನು ಅಧಿಕೃತವಾಗಿ ಮುಗಿಸಿದ್ದಾರೆ.
ದೆಹಲಿ ಹೈಕೋರ್ಟ್‌ನಿಂದ ಅನುಮತಿ ಪಡೆದ ನಂತರ ವಾಂಗ್ಚುಕ್ ಅವರನ್ನು ಯಾವುದೇ ಅಂಬುಲೆನ್ಸ್ ಸೈರನ್ ಶಬ್ದವಿಲ್ಲದೆ ಅತ್ಯಂತ ಗೌಪ್ಯವಾಗಿ ಗುರುಗ್ರಾಮದ ಮೆದಾಂತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇನ್ನೊಂದೆಡೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರೊಂದಿಗೆ ಬರೋಬ್ಬರಿ 4 ಗಂಟೆಗಳ ಕಾಲ ಸುದೀರ್ಘ ಹೈ-ಲೆವೆಲ್ ಸಭೆ ನಡೆಸಿದ್ದರು. ಈ ವೇಳೆ ವಾಂಗ್ಚುಕ್ ಅವರ ಪತ್ನಿ ಜೊತೆಗೂ ಮಾತನಾಡಿ, ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿ, ಹೋರಾಟವನ್ನು ಸುಖಾಂತ್ಯಗೊಳಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಯಿತು.
ಅದೇ ದಿನ ತಡರಾತ್ರಿ ಸುಮಾರು 11:45 ಕ್ಕೆ ಮೆದಾಂತ ಆಸ್ಪತ್ರೆಯ ಐಸಿಯುಗೆ ಭೇಟಿ ನೀಡಿದ ಕೇಂದ್ರ ಸಚಿವರು, ವೈದ್ಯರು ಹಾಗೂ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ವಾಂಗ್ಚುಕ್ ಅವರೊಂದಿಗೆ ಸಮಾಲೋಚನೆ ನಡೆಸಿದರು. ಕೇವಲ 10 ನಿಮಿಷಗಳ ಕಾಲ ನಡೆದ ಈ ಗೌಪ್ಯ ಚರ್ಚೆಯ ಮರುದಿನವೇ ವಾಂಗ್ಚುಕ್ ಸರ್ಕಾರಕ್ಕೆ 3 ಮುಖ್ಯ ಶರತ್ತುಗಳನ್ನು ವಿಧಿಸಿ, ತಮ್ಮ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯಲು ಸಿದ್ಧವೆಂದು ಘೋಷಿಸಿದರು.
ವಾಂಗ್ಚುಕ್ ಸರ್ಕಾರಕ್ಕೆ ನೀಡಿದ್ದ ಶರತ್ತುಗಳೆಂದರೆ; ಮೊದಲನೆಯದಾಗಿ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯಾವುದೇ ವಿದ್ಯಾರ್ಥಿಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಬಾರದು. ಎರಡನೆಯದಾಗಿ, ನೀಟ್ (NEET) ಗೊಂದಲದಿಂದಾಗಿ ಪ್ರಾಣ ಕಳೆದುಕೊಂಡ ಅಭ್ಯರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಮೂರನೆಯದಾಗಿ, ಈ ವಿಷಯದ ಕುರಿತು ಸಂಸತ್ತಿನಲ್ಲಿ ವಿವರವಾದ ಚರ್ಚೆಯಾಗಬೇಕು ಎಂಬುದಾಗಿತ್ತು. ಸರ್ಕಾರ ಈ ಬೇಡಿಕೆಗಳಿಗೆ ಸಮ್ಮತಿ ಸೂಚಿಸುತ್ತಿದ್ದಂತೆ ವಾಂಗ್ಚುಕ್ ತಮ್ಮ ಉಪವಾಸವನ್ನು ಕೊನೆಗೊಳಿಸಿದರು.
ಆದರೆ, ಆರಂಭದಿಂದಲೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದ ವಾಂಗ್ಚುಕ್, ಕೊನೆಗೆ ಅವರ ರಾಜೀನಾಮೆಯನ್ನೇ ಕೇಳದಿರುವುದು ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ. ವಾಂಗ್ಚುಕ್ ತಮ್ಮ ಹೋರಾಟ ಹಿಂಪಡೆದಿದ್ದರೂ, ಜಂತರ್ ಮಂತರ್‌ನಲ್ಲಿ ಸಿಜೆಪಿ (CJP) ವಿದ್ಯಾರ್ಥಿ ಸಂಘಟನೆಯು ಸಚಿವರ ರಾಜೀನಾಮೆ ಸಿಗುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದೆ. ಏನೇ ಆದರೂ, 26 ದಿನಗಳ ಕಾಲ ನಡೆದ ದೊಡ್ಡ ಹೈಡ್ರಾಮಾಗೆ ಸದ್ಯಕ್ಕೆ ತೆರೆ ಬಿದ್ದಂತಾಗಿದೆ.




