ದೇಶಾದ್ಯಂತ ಬ್ಯಾಂಕ್ ಬಂದ್? ಮುಷ್ಕರದ ದಿನಾಂಕ ಫಿಕ್ಸ್!

ದೇಶಾದ್ಯಂತ ಬ್ಯಾಂಕ್ ನೌಕರರು ಮತ್ತೊಮ್ಮೆ ಮುಷ್ಕರದ ಹಾದಿ ಹಿಡಿದಿದ್ದು, ಸಾರ್ವಜನಿಕ ಬ್ಯಾಂಕಿಂಗ್ ಸೇವೆಗಳಿಗೆ ವ್ಯತ್ಯಯ ಉಂಟಾಗುವ ಸಾಧ್ಯತೆ ಎದುರಾಗಿದೆ. ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸಬೇಕು ಹಾಗೂ ಹಿರಿಯ ಅಧಿಕಾರಿಗಳಿಗೆ ಜಾರಿಗೊಳಿಸಿರುವ ಪರಿಷ್ಕೃತ ಪಿಎಲ್‌ಐ ಪ್ರೋತ್ಸಾಹಕ ಯೋಜನೆಯನ್ನು ಹಿಂಪಡೆಯಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ, ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ರಾಷ್ಟ್ರವ್ಯಾಪಿ ಸರಣಿ ಮುಷ್ಕರಕ್ಕೆ ಕರೆ ನೀಡಿದೆ ಅಂತ ಹೇಳಲಾಗ್ತಿದೆ.

ಸಾರ್ವಜನಿಕ, ಖಾಸಗಿ ಮತ್ತು ಗ್ರಾಮೀಣ ಬ್ಯಾಂಕ್‌ಗಳ ಶೇಕಡಾ 90ಕ್ಕೂ ಅಧಿಕ ಸಿಬ್ಬಂದಿಯನ್ನು ಪ್ರತಿನಿಧಿಸುವ ಒಕ್ಕೂಟದ ಘೋಷಣೆಯಂತೆ, ಮೊದಲ ಹಂತದ ಮುಷ್ಕರ ಸೆಪ್ಟೆಂಬರ್ 11ರಂದು ನಡೆಯಲಿದೆ. ಬಳಿಕ ಸೆಪ್ಟೆಂಬರ್ 28, 29 ಮತ್ತು 30ರಂದು ಸತತ ಮೂರು ದಿನಗಳ ಪ್ರತಿಭಟನೆ ನಡೆಯಲಿದೆಯಂತೆ! ಸರ್ಕಾರ ಈ ಅವಧಿಯಲ್ಲಿ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಅಕ್ಟೋಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಒಕ್ಕೂಟ ಎಚ್ಚರಿಸಿದೆ.

ಇನ್ನು ಪ್ರಮುಖ ಬೇಡಿಕೆಯಲ್ಲಿ, ಮಾರ್ಚ್ 2024ರಲ್ಲಿ ಮಾಡಿಕೊಂಡ ಒಪ್ಪಂದದಂತೆ ಎಲ್ಲಾ ಶನಿವಾರಗಳನ್ನು ರಜಾದಿನಗಳನ್ನಾಗಿ ಘೋಷಿಸಬೇಕು ಎಂಬುದು ಪ್ರಮುಖವಾಗಿದೆ. ಇದಕ್ಕಾಗಿ ಪ್ರತಿದಿನ 40 ನಿಮಿಷ ಹೆಚ್ಚುವರಿಯಾಗಿ ಕೆಲಸ ಮಾಡಲು ಸಿದ್ಧವಿರುವುದಾಗಿ ನೌಕರರು ತಿಳಿಸಿದ್ದಾರೆ. ಆದರೆ ಈ ಪ್ರಸ್ತಾವನೆ ಕಳೆದ ಎರಡು ವರ್ಷಗಳಿಂದ ಹಣಕಾಸು ಸಚಿವಾಲಯದ ಅನುಮೋದನೆಗಾಗಿ ಬಾಕಿ ಉಳಿದಿದೆ.

ಇದರ ಜೊತೆಗೆ, ಹಿರಿಯ ಅಧಿಕಾರಿಗಳಿಗೆ ಮಾತ್ರ ಅನ್ವಯವಾಗುವ ಹೊಸ ಪಿಎಲ್‌ಐ ಸೂತ್ರ ತಾರತಮ್ಯದಿಂದ ಕೂಡಿದೆ ಎಂದು ಬ್ಯಾಂಕ್ ನೌಕರರ ಒಕ್ಕೂಟ ಆಕ್ಷೇಪಿಸಿದ್ದು, ಮುಷ್ಕರದ ದಿನಗಳಲ್ಲಿ ಬ್ಯಾಂಕ್ ಸೇವೆಗಳಿಗೆ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ, ಗ್ರಾಹಕರು ಹಣ ವರ್ಗಾವಣೆ, ಚೆಕ್, ನಗದು ವಹಿವಾಟು ಸೇರಿದಂತೆ ಪ್ರಮುಖ ಬ್ಯಾಂಕ್ ಕೆಲಸಗಳನ್ನು ಮುಂಚಿತವಾಗಿಯೇ ಪೂರ್ಣಗೊಳಿಸಿಕೊಳ್ಳುವುದು ಸೂಕ್ತ ಅಂತ ಹೇಳಬಹುದು…

About The Author