Bidar News: ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಮದನೂರ ಗ್ರಾಮದಲ್ಲಿ ನಿನ್ನೆ ಮಧ್ಯಾಹ್ನ ಸುಮಾರು 2:00 ರಿಂದ 3:00 ಗಂಟೆಯ ವೇಳೆಗೆ ವಿದ್ಯುತ್ ಕಂಬ ಧರಾಶಾಹಿಯಾದ ಘಟನೆ ಸಂಭವಿಸಿದೆ.
,
ಜಸ್ಕಾಂ (GESCOM) ಅಧಿಕಾರಿಗಳು ಇದುವರೆಗೂ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆ ನಡೆದು ಇಷ್ಟೊಂದು ಸಮಯ ಕಳೆದರೂ ಜಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇಡೀ ರಾತ್ರಿ ಕತ್ತಲಲ್ಲಿ ಕಳೆಯುವಂತಾಗಿದೆ.
ತೀವ್ರ ಸೆಖೆ ಹಾಗೂ ಕತ್ತಲೆಯಿಂದಾಗಿ ವೃದ್ಧರು, ಮಕ್ಕಳು ಮತ್ತು ಸಾರ್ವಜನಿಕರು ಇಡೀ ರಾತ್ರಿ ವಿದ್ಯುತ್ ಸಂಪರ್ಕವಿಲ್ಲದೆ ತೀವ್ರ ತೊಂದರೆ ಅನುಭವಿಸಿ ಒದ್ದಾಡುವಂತಾಗಿದೆ.
“ನಿನ್ನೆ ಮಧ್ಯಾಹ್ನವೇ ವಿದ್ಯುತ್ ಕಂಬ ಬಿದ್ದು ಅಪಾಯಕಾರಿ ವಾತಾವರಣ ನಿರ್ಮಾಣವಾಗಿದ್ದರೂ ಜಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯದಿಂದ ಗ್ರಾಮಸ್ಥರು ಇಡೀ ರಾತ್ರಿ ವಿದ್ಯುತ್ ಇಲ್ಲದೆ ಪರದಾಡಿದ್ದಾರೆ.
ಬೀದಿಯಲ್ಲಿ ರಸ್ತೆ ಮಧ್ಯೆ ಬಿದ್ದಿರುವ ವಿದ್ಯುತ್ ತಂತಿಗಳಿಂದ ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಅಪಾಯ ಉಂಟಾಗುವ ಭೀತಿ ಎದುರಾಗಿದೆ,” ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ದುರಸ್ತಿಗೊಳಿಸಿ ವಿದ್ಯುತ್ ಸಂಪರ್ಕ ಮರುಸ್ಥಾಪಿಸಬೇಕು, ಇಲ್ಲವಾದಲ್ಲಿ ಜಸ್ಕಾಂ ಕಚೇರಿ ಮುಂದೆ ಗ್ರಾಮಸ್ಥರೊಂದಿಗೆ ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.




