ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಾಂದ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯ ಭಾಗವಾಗಿ, ASDDO (Absent, Shifted, Dead, Duplicate & Others) ಪಟ್ಟಿಯಲ್ಲಿ ತಮ್ಮ ಹೆಸರು ಸೇರಿರುವುದನ್ನು ಸಾರ್ವಜನಿಕರು ಇದೀಗ ಆನ್ಲೈನ್ನಲ್ಲೇ ಪರಿಶೀಲಿಸಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ತಿಳಿಸಿದ್ದಾರೆ.
ರಾಜ್ಯದ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ 1.11 ಕೋಟಿಗೂ ಹೆಚ್ಚು ಮತದಾರರನ್ನು ASDDO ವಿಭಾಗದಡಿ ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಹೆಸರು ಸೇರಿದೆಯೇ ಎಂಬುದನ್ನು ತಿಳಿದುಕೊಳ್ಳಲು ಸಾರ್ವಜನಿಕರು ಮುಖ್ಯ ಚುನಾವಣಾಧಿಕಾರಿಗಳ ವೆಬ್ಸೈಟ್ನ ASDDO ವಿಭಾಗಕ್ಕೆ ಭೇಟಿ ನೀಡಿ ಜಿಲ್ಲಾವಾರು ಪಟ್ಟಿಯಲ್ಲಿ ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಬಹುದು.
ತಪ್ಪಾಗಿ ಹೆಸರು ಸೇರಿದ್ದರೆ ಏನು ಮಾಡಬೇಕು?
ಮತದಾರರು ಇನ್ನೂ ತಮ್ಮ ಹಳೆಯ ವಿಳಾಸದಲ್ಲೇ ವಾಸವಾಗಿದ್ದರೂ, ASDDO ಪಟ್ಟಿಯಲ್ಲಿ ‘ಸ್ಥಳಾಂತರಗೊಂಡಿದ್ದಾರೆ’ ಅಥವಾ ‘ಗೈರುಹಾಜರಾಗಿದ್ದಾರೆ’ ಎಂದು ತಪ್ಪಾಗಿ ದಾಖಲಾಗಿದ್ದರೆ ಆತಂಕಪಡುವ ಅಗತ್ಯವಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಇಂತಹ ಸಂದರ್ಭದಲ್ಲಿ ತಕ್ಷಣವೇ ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿ (BLO) ಅವರನ್ನು ಸಂಪರ್ಕಿಸಿ, ಪ್ರಸ್ತುತ ಅದೇ ವಿಳಾಸದಲ್ಲಿ ವಾಸವಿರುವುದನ್ನು ದೃಢೀಕರಿಸಬೇಕು. ಬಿಎಲ್ಒ ನೀಡುವ ಸ್ವಯಂ ಘೋಷಣಾ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಿದ ಬಳಿಕ ಪರಿಶೀಲನೆ ನಡೆಸಿ, ತಪ್ಪಿದ್ದರೆ ASDDO ಪಟ್ಟಿಯಿಂದ ಹೆಸರನ್ನು ತೆಗೆದುಹಾಕಿ ಮತದಾರರ ಪಟ್ಟಿಯಲ್ಲಿ ಮುಂದುವರಿಸಲಾಗುತ್ತದೆ.
ಆಗಸ್ಟ್ 17ರಂದು ಕರಡು ಮತದಾರರ ಪಟ್ಟಿ ಪ್ರಕಟ
ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಆಗಸ್ಟ್ 17ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ASDDO ಪಟ್ಟಿಯಲ್ಲಿಯೇ ಅಂತಿಮವಾಗಿ ಉಳಿಯುವ ಮತದಾರರ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ.
ಹೀಗಾಗಿ, ಮತದಾರರು ಯಾವುದೇ ವಿಳಂಬ ಮಾಡದೆ ತಮ್ಮ ಹೆಸರು ASDDO ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿ, ತಪ್ಪು ಕಂಡುಬಂದರೆ ಕೂಡಲೇ ತಮ್ಮ BLO ಅವರನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳೊಂದಿಗೆ ಸ್ವಯಂ ಘೋಷಣಾ ನಮೂನೆಯನ್ನು ಸಲ್ಲಿಸುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ.
ಮತದಾರರ ಪಟ್ಟಿಯಲ್ಲಿ ಹೆಸರು ಉಳಿಯಲು ಹಾಗೂ ಮತದಾನದ ಹಕ್ಕು ಕಳೆದುಕೊಳ್ಳದಂತೆ ಸಾರ್ವಜನಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅಧಿಕಾರಿಗಳು ಕರೆ ನೀಡಿದ್ದಾರೆ.




