ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಇಂದು ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ಸ್ ಅಸೋಸಿಯೇಷನ್ (AKSSA) ನೇತೃತ್ವದಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಆಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಪಿಎಸ್‌ಸಿ ವತಿಯಿಂದ ನಡೆದ 400 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಹಾಗೂ ಪಾರದರ್ಶಕತೆ ಕೊರತೆ ಕಂಡುಬಂದಿದೆ ಎಂದು ಆರೋಪಿಸಿರುವ ಅಭ್ಯರ್ಥಿಗಳು, ನೇಮಕಾತಿಯನ್ನು ರದ್ದುಪಡಿಸಿ ಮರು ಪರೀಕ್ಷೆ ನಡೆಸುವಂತೆ ಆಗ್ರಹಿಸುತ್ತಿದ್ದಾರೆ. ಕೆಪಿಎಸ್‌ಸಿ ನಡೆಸುತ್ತಿರುವ 400 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ, ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ಸ್ ಅಸೋಸಿಯೇಷನ್ (AKSSA) ನೇತೃತ್ವದಲ್ಲಿ ಸಾವಿರಾರು ಅಭ್ಯರ್ಥಿಗಳು ಇಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನಾಕಾರರ ಆರೋಪದ ಪ್ರಕಾರ, 2024ರ ಜುಲೈ 29ರಂದು ಅಧಿಸೂಚನೆ ಹೊರಡಿಸಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಯಿತು. ಬಳಿಕ 2026ರ ಜನವರಿ 8 ಮತ್ತು 9ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಯಿತು. ನಂತರ ಜುಲೈ 7, 2026ರಂದು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಯಿತು. ಆದರೆ ಈ ಪಟ್ಟಿಯಲ್ಲಿ ಅನೇಕ ಗಂಭೀರ ಅಕ್ರಮಗಳು ನಡೆದಿವೆ ಎಂದು ಅಭ್ಯರ್ಥಿಗಳು ಆರೋಪಿಸುತ್ತಿದ್ದಾರೆ.
ಅಭ್ಯರ್ಥಿಗಳ ಪ್ರಕಾರ, ಮೌಲ್ಯಮಾಪನದಲ್ಲಿ ಪಾರದರ್ಶಕತೆ ಇಲ್ಲದಿರುವುದು, ಅರ್ಹ ಅಭ್ಯರ್ಥಿಗಳನ್ನು ಕಡೆಗಣಿಸಿರುವುದು, ಅಂಕಗಳ ಹಂಚಿಕೆಯಲ್ಲಿ ವ್ಯತ್ಯಾಸ ಕಂಡುಬಂದಿರುವುದು ಹಾಗೂ ಮೀಸಲಾತಿ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.
ಇದಲ್ಲದೆ, ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಸೇವಾ ಅನುಭವಕ್ಕೆ ನ್ಯಾಯಯುತ ಅಂಕಗಳನ್ನು ನೀಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸುತ್ತಿದ್ದಾರೆ. ಯುಜಿಸಿ ನಿಯಮಾವಳಿಗಳ ಪ್ರಕಾರ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರಿಗೆ ಸೂಕ್ತ ಮಾನ್ಯತೆ ಹಾಗೂ ಅನುಭವದ ಅಂಕಗಳನ್ನು ನೀಡಬೇಕಾಗಿದ್ದರೂ ಅದನ್ನು ಪಾಲಿಸಲಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ಹಲವಾರು ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ಸಿಜಿಪಿಎ (CGPA) ಅನ್ನು ಅಂಕಗಳಿಗೆ ಪರಿವರ್ತಿಸುವ ವಿಧಾನದಲ್ಲಿಯೂ ಗೊಂದಲ ಉಂಟಾಗಿದೆ ಎಂದು ಆರೋಪಿಸಲಾಗಿದೆ. ಕೆಲ ಅಭ್ಯರ್ಥಿಗಳಿಗೆ ನಿಯಮಬಾಹಿರವಾಗಿ ಹೆಚ್ಚಿನ ಅಂಕಗಳನ್ನು ನೀಡಲಾಗಿದೆ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ.
ಇದರ ಜೊತೆಗೆ, ಹಲವು ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಸರಿಯಾಗಿ ನಡೆದಿಲ್ಲ. ಕೆಲವರಿಗೆ ಅವಕಾಶ ನೀಡಲಾಗಿದ್ದರೆ, ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ಮರು ಪರಿಶೀಲನೆಗೆ ಒಳಪಡಿಸಿ ನ್ಯಾಯಸಮ್ಮತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿಭಟನಾಕಾರರು ಸರ್ಕಾರದ ಮುಂದೆ ಹಲವು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಮೊದಲನೆಯದಾಗಿ, 400 ಸಹಾಯಕ ಪ್ರಾಧ್ಯಾಪಕರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಕ್ಷಣವೇ ರದ್ದುಪಡಿಸಬೇಕು. ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಎಲ್ಲ ಅಕ್ರಮಗಳ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕು. ಪರೀಕ್ಷೆಯ ಮೌಲ್ಯಮಾಪನ, ಅಂಕಪಟ್ಟಿ ಹಾಗೂ ದಾಖಲೆ ಪರಿಶೀಲನೆ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ಬಹಿರಂಗಪಡಿಸಬೇಕು. ಯುಜಿಸಿ ನಿಯಮಾವಳಿಗಳ ಪ್ರಕಾರ ಅತಿಥಿ ಉಪನ್ಯಾಸಕರಿಗೆ ಸೇವಾ ಅನುಭವದ ಅಂಕಗಳನ್ನು ನ್ಯಾಯಯುತವಾಗಿ ನೀಡಬೇಕು. ಅರ್ಹ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಹೊಸದಾಗಿ ನ್ಯಾಯಸಮ್ಮತ ಆಯ್ಕೆ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇಂದು ನಡೆಯುತ್ತಿರುವ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ನೂರಾರು ಅಭ್ಯರ್ಥಿಗಳು ಭಾಗಿಯಾಗಿದ್ದು, ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಒಂದು ವೇಳೆ ಸರ್ಕಾರ ಮತ್ತು ಕೆಪಿಎಸ್‌ಸಿ ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ಸ್ ಅಸೋಸಿಯೇಷನ್ (AKSSA) ರಾಜ್ಯಾಧ್ಯಕ್ಷ ಕಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.




