ಮೋದಿ ವಿರುದ್ಧ ಬಿ.ಕೆ. ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ!

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಏಕವಚನದಲ್ಲಿ ಮಾತನಾಡಿ, ಅವರ ವೈಯಕ್ತಿಕ ವಿಚಾರವನ್ನು ಪ್ರಸ್ತಾಪಿಸಿರುವುದು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹರಿಪ್ರಸಾದ್, ಪ್ರಧಾನಿ ಮೋದಿ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮ ಹಾಗೂ ಧಾರ್ಮಿಕತೆಯ ಕುರಿತ ನಿಲುವುಗಳನ್ನು ಪ್ರಶ್ನಿಸಿದರು. ಇದೇ ವೇಳೆ, ‘ತ್ರಿಬಲ್ ತಲಾಖ್’ ವಿಚಾರ ಪ್ರಸ್ತಾಪಿಸಿ ಪ್ರಧಾನಿ ಅವರ ವೈಯಕ್ತಿಕ ಬದುಕಿನ ಬಗ್ಗೆಯೂ ಟೀಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ಮೋದಿ ಹೆಂಗಸರ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾರೆ. ‘ಇವರಿಗೆ ಮದುವೆಯೇ ಆಗಿಲ್ಲ, ಇನ್ನು ತ್ರಿಬಲ್ ತಲಾಖ್ ಇವನಿಗೆ ಯಾಕೆ ಬೇಕು?’ ಎಂದು ಪ್ರಧಾನಿ ವಿರುದ್ಧ ಏಕವಚನದಲ್ಲಿ ವಿವಾದಾತ್ಮಕವಾಗಿ ಮಾತನಾಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಪ್ರಧಾನಿ ಮೋದಿ ಅವರು ಪ್ರಧಾನಿಯಾಗಿ 12 ವರ್ಷ ಕಳೆದರೂ ಧಾರ್ಮಿಕತೆ ಕುರಿತು 12 ನಿಮಿಷವಾದರೂ ಮಾತನಾಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಬಳಿಕ ತ್ರಿಬಲ್ ತಲಾಖ್ ವಿಚಾರವನ್ನು ಪ್ರಸ್ತಾಪಿಸಿ, ಪ್ರಧಾನಿ ಮೋದಿ ಅವರ ವೈಯಕ್ತಿಕ ಬದುಕಿನ ಬಗ್ಗೆ ಟೀಕಾತ್ಮಕವಾಗಿ ಮಾತನಾಡಿದ್ದಾರೆ. ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ.

ಇತ್ತೀಚೆಗಷ್ಟೇ ಉಮರ್ ಖಾಲಿದ್ ವಿಚಾರದಲ್ಲೂ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ದೇಶದ್ರೋಹದ ಆರೋಪ ಎದುರಿಸುತ್ತಿರುವ ಉಮರ್ ಖಾಲಿದ್ ಅವರನ್ನು ‘ರಾಷ್ಟ್ರವಾದಿ’ ಎಂದು ಕರೆದಿದ್ದ ಹರಿಪ್ರಸಾದ್ ಅವರ ವಿರುದ್ಧ ದೂರು ಕೂಡ ದಾಖಲಾಗಿತ್ತು ಎಂದು ವರದಿಯಾಗಿದೆ.

ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಹರಿಪ್ರಸಾದ್, ಕೇವಲ ಪ್ರಕರಣ ದಾಖಲಾಗಿದೆ ಎಂಬ ಕಾರಣಕ್ಕೆ ಯಾರನ್ನೂ ಅಪರಾಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು. ನ್ಯಾಯಾಲಯದಿಂದ ಅಪರಾಧ ಸಾಬೀತಾಗುವವರೆಗೆ ಆರೋಪ ಮತ್ತು ಅಪರಾಧದ ನಡುವೆ ವ್ಯತ್ಯಾಸವಿದೆ ಎಂದು ಅವರು ಹೇಳಿದ್ದರು.

ಯಾವ ನ್ಯಾಯಾಲಯ ಉಮರ್ ಖಾಲಿದ್ ಅವರನ್ನು ದೇಶದ್ರೋಹಿ ಎಂದು ಘೋಷಿಸಿದೆ ಎಂದು ಪ್ರಶ್ನಿಸಿದ್ದ ಹರಿಪ್ರಸಾದ್, ವಿಚಾರಣೆ ವಿಳಂಬವಾಗುತ್ತಿರುವುದನ್ನೂ ಪ್ರಶ್ನಿಸಿದ್ದರು. ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಪ್ರತಿಯೊಬ್ಬರನ್ನೂ ದೇಶದ್ರೋಹಿ ಎಂದು ಕರೆಯುವುದು ಪ್ರಜಾಪ್ರಭುತ್ವದ ಭಾಷೆಯಲ್ಲ ಎಂದು ಅವರು ಹೇಳಿದ್ದರು.

ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವಿಚಾರವನ್ನು ಪ್ರಸ್ತಾಪಿಸಿ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆ ಮತ್ತೊಂದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಹೇಳಿಕೆಗೆ ಬಿಜೆಪಿ ಸೇರಿದಂತೆ ವಿವಿಧ ವಲಯಗಳಿಂದ ಪ್ರತಿಕ್ರಿಯೆಗಳು ವ್ಯಕ್ತವಾಗುವ ಸಾಧ್ಯತೆಯಿದ್ದು, ಈ ವಿಚಾರ ಮುಂದಿನ ದಿನಗಳಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗುವ ಸಾಧ್ಯತೆಯಿದೆ.

About The Author