ಬೆಂಗಳೂರು: ಕೆಪಿಎಸ್ಸಿ (KPSC) ನೇಮಕಾತಿ ಅಕ್ರಮಗಳಿಗೆ ಕೇವಲ ತನಿಖಾ ಸಂಸ್ಥೆಗಳ ಮೇಲೆ ಅವಲಂಬಿತರಾಗುವುದರಿಂದ ಪರಿಹಾರ ಸಿಗುವುದಿಲ್ಲ. ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಸ್ವತಃ ಸಂಘಟಿತರಾಗಿ ನಿರಂತರ ಹೋರಾಟ ನಡೆಸಿದಾಗ ಮಾತ್ರ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ ಎಂದು ಎಐಡಿವೈಒ (AIDYO) ಯುವ ಸಂಘಟನೆಯ ರಾಜ್ಯ ಮುಖಂಡ ಜಯಣ್ಣ ಅಭಿಪ್ರಾಯಪಟ್ಟರು.
ಕೆಪಿಎಸ್ಸಿ ಅಕ್ರಮದ ಕುರಿತು ನಡೆದ ವಿಶೇಷ ಚಿಟ್‌ಚಾಟ್‌ನಲ್ಲಿ ಮಾತನಾಡಿದ ಅವರು, ಕೆಪಿಎಸ್ಸಿ ಅಕ್ರಮದ ವಿಷಯ ಕಾಲಕಾಲಕ್ಕೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಬರುತ್ತದೆ. ಆದರೆ ಕೆಲವೇ ದಿನಗಳಲ್ಲಿ ಅದು ಮರೆತುಹೋಗುತ್ತದೆ. ಈ ಪರಿಸ್ಥಿತಿ ಬದಲಾಗಬೇಕಾದರೆ ವಿದ್ಯಾರ್ಥಿಗಳು, ಯುವಕರು ಮತ್ತು ಉದ್ಯೋಗಾರ್ಥಿಗಳು ತಮ್ಮ ಸಮಸ್ಯೆಯನ್ನು ತಾವೇ ಎದುರಿಸಿ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
“ಇದು ನಮ್ಮ ಭವಿಷ್ಯದ ಪ್ರಶ್ನೆ ಎಂಬ ಮನೋಭಾವ ಯುವಕರಲ್ಲಿ ಮೂಡಬೇಕು. ಸ್ವಲ್ಪ ಅಕ್ರಮ ನಡೆದರೂ ವಿದ್ಯಾರ್ಥಿಗಳು ಬೀದಿಗಿಳಿಯುತ್ತಾರೆ ಎಂಬ ಭಯ ಅಧಿಕಾರಿಗಳಿಗೆ ಮೂಡಿದಾಗ ಮಾತ್ರ ಕೆಪಿಎಸ್ಸಿಯಲ್ಲಿ ಪಾರದರ್ಶಕತೆ ಮತ್ತು ಬದಲಾವಣೆ ಸಾಧ್ಯ” ಎಂದು ಅವರು ಹೇಳಿದರು.
ಕೆಲವು ಸಂಘಟನೆಗಳು ಕೆಪಿಎಸ್ಸಿ ಅಕ್ರಮದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿದ ಜಯಣ್ಣ, ತನಿಖಾ ಸಂಸ್ಥೆಗಳಿಗಿಂತ ಜನರ ಸಂಘಟಿತ ಹೋರಾಟವೇ ಹೆಚ್ಚು ಪರಿಣಾಮಕಾರಿ ಎಂದು ಅಭಿಪ್ರಾಯಪಟ್ಟರು.
“ಸಿಬಿಐ, ಸಿಐಡಿ ಸೇರಿದಂತೆ ಹಲವು ತನಿಖಾ ಸಂಸ್ಥೆಗಳ ಕಾರ್ಯವೈಖರಿ ಕುರಿತು ಜನರಲ್ಲಿ ಪ್ರಶ್ನೆಗಳಿವೆ. ಹಲವು ಪ್ರಕರಣಗಳಲ್ಲಿ ನಿರೀಕ್ಷಿತ ನ್ಯಾಯ ದೊರೆತ ಉದಾಹರಣೆಗಳು ಕಡಿಮೆ. ಆದ್ದರಿಂದ ಕೇವಲ ತನಿಖಾ ಸಂಸ್ಥೆಗಳ ಮೇಲೆ ಅವಲಂಬಿಸದೆ ವಿದ್ಯಾರ್ಥಿಗಳು ಮತ್ತು ಯುವಕರು ಪ್ರಜ್ಞಾವಂತಿಕೆಯಿಂದ ಸಂಘಟಿತರಾಗಿ ಹೋರಾಟ ನಡೆಸಬೇಕು” ಎಂದು ಹೇಳಿದರು.
ನೀಟ್ ಪರೀಕ್ಷೆ ವಿರುದ್ಧ ದೇಶಾದ್ಯಂತ ನಡೆದ ವಿದ್ಯಾರ್ಥಿ ಹೋರಾಟವನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ಜನರು ಒಗ್ಗಟ್ಟಾಗಿ ಹೋರಾಟ ನಡೆಸಿದಾಗ ಮಾತ್ರ ಸರ್ಕಾರ ಮತ್ತು ಅಧಿಕಾರಿಗಳ ಮೇಲೆ ಒತ್ತಡ ನಿರ್ಮಾಣವಾಗುತ್ತದೆ. ಕೆಪಿಎಸ್ಸಿ ಅಕ್ರಮದ ವಿರುದ್ಧವೂ ಇದೇ ರೀತಿಯ ಬಲವಾದ ವಿದ್ಯಾರ್ಥಿ ಚಳವಳಿ ಅಗತ್ಯವಾಗಿದೆ ಎಂದು ಹೇಳಿದರು.
ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಗೂ ಉದ್ಯೋಗಾರ್ಥಿಗಳಿಗೆ ನ್ಯಾಯ ಸಿಗುವವರೆಗೆ ಎಐಡಿವೈಒ ಸಂಘಟನೆ ತನ್ನ ಹೋರಾಟವನ್ನು ನಿರಂತರವಾಗಿ ಮುಂದುವರಿಸಲಿದೆ ಎಂದು ಜಯಣ್ಣ ತಿಳಿಸಿದರು.




