ಆಗಸ್ಟ್ 13ಕ್ಕೆ ಕರ್ನಾಟಕ ಬಂದ್ ಫಿಕ್ಸ್ – ನಮ್ಮ ನೀರು ನಮ್ಮ ಹಕ್ಕು!

ಕಾವೇರಿ ನೀರು ಬಿಡುಗಡೆ, ಮೇಕೆದಾಟು ಯೋಜನೆ ಹಾಗೂ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಆಗಸ್ಟ್ 13ರಂದು ರಾಜ್ಯವ್ಯಾಪಿ ಕರ್ನಾಟಕ ಬಂದ್ ನಡೆಸುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ. ರಾಜ್ಯದ ನೀರಿನ ಹಕ್ಕು ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕಾಗಿ ಈ ಬಂದ್‌ಗೆ ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸುತ್ತಿವೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, “ಆಗಸ್ಟ್ 13ರಂದು ಕರ್ನಾಟಕ ಬಂದ್ ಮಾಡೇ ಮಾಡ್ತೀವಿ. ತಮಿಳುನಾಡಿನಲ್ಲಿ ಪ್ರತಿದಿನ ಹೋರಾಟ ನಡೆಯುತ್ತಿದೆ. ಆದರೆ ಕರ್ನಾಟಕದಲ್ಲೂ ರಾಜ್ಯದ ಹಿತಾಸಕ್ತಿಗಾಗಿ ಬೃಹತ್ ಹೋರಾಟ ನಡೆಸುವ ಸಮಯ ಬಂದಿದೆ. ಈ ಬಂದ್ 100 ಕ್ಕೆ 100 ಪರ್ಸೆಂಟ್ ಮಾಡೇ ಮಾಡುತ್ತೇವೆ.

ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಟೀಕಿಸಿದ ಅವರು, “ಮೇಕೆದಾಟು ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಬಾರದು. ರಾಜ್ಯದ ಜನರಿಗೆ ಕುಡಿಯುವ ನೀರು ಹಾಗೂ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಜಾರಿಯಾಗಲೇಬೇಕು” ಎಂದು ಆಗ್ರಹಿಸಿದರು.

ಇದೇ ವೇಳೆ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಕುರಿತು ಮಾತನಾಡಿದ ಅವರು, “ಮೇಕೆದಾಟು ಬಳಿಕ ಮಹದಾಯಿ ಹಾಗೂ ಕಲಸಾ-ಬಂಡೂರಿ ಯೋಜನೆಗಳನ್ನೂ ಪೂರ್ಣಗೊಳಿಸಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಈ ಯೋಜನೆಗಳು ಅತ್ಯಂತ ಅಗತ್ಯ” ಎಂದರು.

ಸರ್ಕಾರವನ್ನು ಉದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್, “ರಾಜ್ಯದ ಹಿತದ ವಿಚಾರದಲ್ಲಿ ಎಲ್ಲರೂ ಒಂದಾಗಿ ನಿಲ್ಲಬೇಕು. ಕನ್ನಡಿಗರು, ರೈತರು, ವ್ಯಾಪಾರಿಗಳು, ಕಾರ್ಮಿಕರು ಹಾಗೂ ವಿವಿಧ ಸಂಘಟನೆಗಳು ಆಗಸ್ಟ್ 13ರ ಕರ್ನಾಟಕ ಬಂದ್‌ಗೆ ಬೆಂಬಲ ನೀಡಿ ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.

ಕಾವೇರಿ ನೀರು, ಮೇಕೆದಾಟು ಹಾಗೂ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ವಿಚಾರದಲ್ಲಿ ರಾಜ್ಯದ ಹಕ್ಕುಗಳಿಗಾಗಿ ಹೋರಾಟ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.

About The Author