ಸಚಿವರಿಂದ 3 ದಿನಗಳ ಬಿಗ್ ಗ್ರೌಂಡ್ ರಿಪೋರ್ಟ್: ಶಿವರಾಜ ಎಸ್. ತಂಗಡಗಿ

ರಾಜ್ಯದಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಶಿವರಾಜ ಎಸ್. ತಂಗಡಗಿ ಅವರು, ಬೆಳೆ ಹಾನಿ ವೀಕ್ಷಿಸಲು ಸ್ವತಃ ಕಣಕ್ಕಿಳಿದಿದ್ದಾರೆ.

ಸಚಿವ ಶಿವರಾಜ ತಂಗಡಗಿ ಅವರು ಜಿಲ್ಲೆಯ ಗಂಗಾವತಿ, ಕನಕಗಿರಿ ಹಾಗೂ ಕುಷ್ಟಗಿ ತಾಲೂಕುಗಳ ವಿವಿಧ ಗ್ರಾಮಗಳಿಗೆ ಧಾವಿಸಿದ್ದು, ಮಳೆಯಿಲ್ಲದೆ ಒಣಗುತ್ತಿರುವ ಮುಂಗಾರು ಬೆಳೆಗಳ ಸ್ಥಿತಿಗತಿಯನ್ನು ಸ್ಥಳದಲ್ಲೇ ವೀಕ್ಷಿಸಿದ್ದಾರೆ. ಈ ವೇಳೆ ಸಂಕಷ್ಟದಲ್ಲಿರುವ ರೈತರ ಬಳಿ ನೇರವಾಗಿ ಮಾತನಾಡಿ, ಮಳೆ ಕೊರತೆಯಿಂದ ಎದುರಾಗಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

ಮುಖ್ಯಮಂತ್ರಿಗಳ ಸೂಚನೆಯಂತೆ ರಾಜ್ಯದ ಎಲ್ಲಾ ಸಚಿವರೂ ತಮ್ಮ ಜಿಲ್ಲೆಗಳಲ್ಲಿ ಬರ ವೀಕ್ಷಣೆ ಮಾಡುತ್ತಿದ್ದಾರೆ. ಅದರಂತೆ ಸಚಿವ ತಂಗಡಗಿ ಅವರು ಮೂರು ದಿನಗಳ ಕಾಲ ಕೊಪ್ಪಳ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರವಾಸ ನಡೆಸಿ ಬೆಳೆಗಳ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ಅಲ್ಲದೆ, ಆಗಸ್ಟ್ 6ರಂದು ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ ಸಮಗ್ರ ವರದಿ ತಯಾರಿಸಲಿದ್ದಾರೆ.

ʼಬರ ಘೋಷಣೆ ವಿಚಾರದಲ್ಲಿ ಜಿಲ್ಲೆಯ ಯಾವುದೇ ತಾಲೂಕಿನ ರೈತರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಬೆಳೆ ಹಾನಿಗೆ ಸೂಕ್ತ ಪರಿಹಾರ ಸಿಗುವಂತೆ ಕಂದಾಯ ಇಲಾಖೆಗೆ ಸಂಪೂರ್ಣ ವರದಿ ಸಲ್ಲಿಸಿ, ರೈತರ ಕೈಹಿಡಿಯುವ ಕೆಲಸ ಮಾಡಲಾಗುವುದು.ʼ ಸಚಿವರ ಈ ಪ್ರವಾಸದ ವೇಳೆ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ, ಜಿಲ್ಲಾ ಎಸ್‌ಪಿ ಡಾ. ರಾಮ್ ಎಲ್. ಅರಸಿದ್ದಿ, ಸಹಾಯಕ ಆಯುಕ್ತ ಮೆಹಬೂಬ ಜಿಲಾನಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಾಥ್ ನೀಡಿದ್ದರು.

About The Author