Political News: ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ವಿರುದ್ಧ ಬಿಜೆಪಿ ಶಾಸಕ ಸುರೇಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಹರಿಪ್ರಸಾದ್ ಮೋದಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದು, ಈ ವಿರುದ್ಧ ಸುರೇಶ್ ಕುಮಾರ್ ಕಿಡಿಕಾರಿದ್ದಾರೆ.
ಕಾಂಗ್ರೆಸ್ ರಾಜ್ಯಾಧ್ಯಕ್ಷ BK ಹರಿಪ್ರಸಾದ್ ರವರ ಅತ್ಯಂತ ಕೀಳು ಮಟ್ಟದ ಮಾತುಗಳನ್ನು ನೋಡಿದಾಗ ಮನಸ್ಸಿಗೆ ಸ್ಪಷ್ಟವಾಗಿ ಅನಿಸುವುದು ಆ ಪಕ್ಷಕ್ಕೆ ಅತಿ ತುರ್ತಾಗಿ #ಕಾಂಗ್ರೆಸ್_ಕೊಳಚೆ_ನೀರು_ಸಂಸ್ಕರಣಾ_ಘಟಕ ಅಳವಡಿಸಬೇಕಿದೆ. ಇಲ್ಲದಿದ್ದರೆ ಈ ಹೊಲಸು ಬಾಯಿ ಹೊರಸೂಸುವ ದುರ್ವಾಸನೆ ರಾಜ್ಯದಲ್ಲೆಲ್ಲಾ ಹರಡಿ ಬೇರೆ ಬೇರೆ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಸುರೇಶ್ ಕುಮಾರ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆಯುವ ಮೂಲಕ ಕಿಡಿಕಾರಿದ್ದಾರೆ..
ಇದಕ್ಕೆ ಎಕ್ಸ್ ಖಾತೆ ಮೂಲಕ ಹರಿಪ್ರಸಾದ್ ತಿರುಗೇಟು ನೀಡಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವುದು ಸಜ್ಜನ ಮುಖವಾಡದ ದುರ್ಜನ ಶಾಸಕ ಸುರೇಶ್‌ಗೆ ಸಹಿಸಲಾಗುತ್ತಿಲ್ಲ. ಬಿಜೆಪಿಯ ಪಟಾಲಂ ಯುಪಿಎ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಮಾಡಿದ ಅವಮಾನಗಳು, ಮಹಿಳಾ ನಿಂದನೆಗಳು, ವೈಯುಕ್ತಿಕ ದಾಳಿಗಳನ್ನು ನಾವು ಮರೆತಿಲ್ಲ. ಶ್ಯಾಡೋ ಪಿಎಂ ಆಗಿರುವ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ರಾಹುಲ್ ಗಾಂಧಿಯ ಮೇಲಿನ ವೈಯುಕ್ತಿಕ ದಾಳಿ, ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ, ಎಐಸಿಸಿ ಅಧ್ಯಕ್ಷ ಖರ್ಗೆ ಮೇಲಿನ ಅಸ್ಪೃಶ್ಯತೆಯ ಪ್ರಯೋಗಗಳು ದುರ್ಜನ ಶಾಸಕ ಸುರೇಶ್ ಕುಮಾರ್ ಗೆ ಕಣ್ಣಿಗೆ ಬಿದ್ದಿಲ್ಲವೇ? ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಮೋದಿಯ ವಿರುದ್ದ ಮಾತಾಡಿದ ತಕ್ಷಣ ‘ಬಿ ಕೆ ಹರಿಪ್ರಸಾದ್ ಅವರದ್ದು ಹೊಲಸು ಬಾಯಿ’ ಎಂದು ಸುರೇಶ್ ಕುಮಾರ್ ಟೀಕಿಸುತ್ತಾರೆ. ನಾನು ನನ್ನ ರಾಜಕೀಯ ಜೀವನದಲ್ಲಿ ಕೈ ಬಾಯಿ ಹೊಲಸು ಮಾಡಿಕೊಂಡಿಲ್ಲ. ಆದರೆ ಸುರೇಶ್ ಕುಮಾರ್ ಮಾತ್ರ ಹೊಲಸಲ್ಲೇ ಹೊರಲಾಡಿ ‘ಸಜ್ಜನ’ ಎಂದು ಬೋರ್ಡ್ ಹಾಕಿಕೊಂಡಿದ್ದಾರೆ. ಸುರೇಶ್ ಕುಮಾರ್ ಮೈಗೆ ಮೆತ್ತಿಕೊಂಡಿರುವ ಹೊಲಸು ತೊಳೆಯಲು ವಿಶ್ವದ ಅತೀ ದೊಡ್ಡ ಕೊಳಚೆ ಸಂಸ್ಕರಣಾ ಘಟಕವಾದ ಈಜಿಪ್ಟ್‌ನಲ್ಲಿರುವ ನ್ಯೂ ಡೆಲ್ಟಾ ನೀರು ಸಂಸ್ಕರಣಾ ಘಟಕಕ್ಕೂ ಸಾದ್ಯವಾಗಲ್ಲ ಎಂದು ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.
ರಾಜಾಜಿನಗರದ ಶಾಸಕರಾಗಿರುವ ದುರ್ಜನ ಶಾಸಕ ಎಸ್. ಸುರೇಶ್ ಕುಮಾರ್ ಅವರು ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಅನುದಾನ ಹಾಗೂ ಪಾಲಿಕೆ ವತಿಯಿಂದ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳಲ್ಲಿ ನಿಯಮಬಾಹಿರವಾಗಿ ಬೇನಾಮಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಟ್ಟು 300 ಕೋಟಿ ರೂಪಾಯಿ ಟೆಂಡರ್ ಅಕ್ರಮ ಎಸಗಿದ್ದಾರೆ ಎಂದು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಕೈ, ಬಾಯಿ ಮಾತ್ರವಲ್ಲ, ಲಂಚದ ಹಣಕ್ಕಾಗಿ ಸುರೇಶ್ ಕುಮಾರ್ ಮೈಯ್ಯೆಲ್ಲಾ ಹೊಲಸು ಮಾಡಿಕೊಂಡು ಹೊಲಸಲ್ಲೇ ಹೊರಲಾಡುತ್ತಿದ್ದಾರೆ.
2020ರಲ್ಲಿ 72.25 ಕೋಟಿ ರೂ. ಮೊತ್ತದ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಟೆಂಡರ್‌ನಲ್ಲಿ ಅತ್ಯಂತ ಕಡಿಮೆ ಬಿಡ್ ಮಾಡಿದ್ದ ಅರ್ಹ ಗುತ್ತಿಗೆದಾರರನ್ನು ತಪ್ಪಿಸಲು ಶಾಸಕರು ಅಧಿಕಾರಿಗಳ ಮೇಲೆ ದೂರವಾಣಿ ಮೂಲಕ ಒತ್ತಡ ಹೇರಿದ್ದಾರೆ. ಪಾಲಿಕೆಯ ಟಿವಿಸಿಸಿ ಮುಖ್ಯ ಎಂಜಿನಿಯರ್ ಕಚೇರಿ ಟಿಪ್ಪಣಿಯಲ್ಲೇ ಶಾಸಕರ ಈ ದಬ್ಬಾಳಿಕೆ ದಾಖಲಾಗಿದೆ. ಇದು ಹೊಲಸು ರಾಜಕೀಯವೋ? ಅಥವಾ ಲಂಚದ ಹಣದ ಆಸೆಗಾಗಿ ಮಾಡಿರುವ “ಸಲೀಸು” ರಾಜಕಾರಣವೋ? ಎಂದು ಹರಿಪ್ರಸಾದ್ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.
ಸುರೇಶ್ ಕುಮಾರನ ಹೊಲಸು ತೊಳೆಯಲು ‘ಕೊಳಚೆ ನೀರು ಸಂಸ್ಕರಣಾ ಘಟಕ’ ಸಾಲುವುದಿಲ್ಲ. ಈ ಹೊಲಸು ಬಿಜೆಪಿಯ ಪರಾಂಪರಾಗತ ಹೊಲಸು. ಪ್ರಧಾನಿ ಮೋದಿ ಪಿಎಂ ಕೇರ್ ನ ಹಣ ನುಂಗಿದರೆ, ಅವರ ಅನುಯಾಯಿ ದುರ್ಜನ ಸುರೇಶ್ ಕುಮಾರ್ ಸಿಎಂ ನಿಧಿಯ ಹಣ ನುಂಗಿದ್ದಾನೆ. ‘ಸಜ್ಜನ’ ಎಂಬ ಬೋರ್ಡ್ ಹಾಕಿಕೊಂಡ ಮಾತ್ರಕ್ಕೆ ಯಾವ ದುರ್ಜನರೂ ಸಜ್ಜನರಾಗುವುದಿಲ್ಲ. ಜನರ ಹಣ, ಜನರ ಹಕ್ಕು ಮತ್ತು ಪ್ರಜಾಪ್ರಭುತ್ವದ ಪ್ರಶ್ನೆ ಬಂದಾಗ ಮುಖವಾಡ ಕಳಚುತ್ತದೆ ಎಂದು ಬಿ.ಕೆ.ಹರಿಪ್ರಸಾದ್ ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.




