Koppala News: ಕುಷ್ಟಗಿ :-ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿಯ ವತಿಯಿಂದ ಸಂವಿಧಾನದ 371ಜೆ ಕಲಂ ಕುರಿತು ಸಮಗ್ರ ಅವಲೋಕನ ಹಾಗೂ ಅಧ್ಯಯನ ಶಿಬಿರವು ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದ ಜಾರಕಿಹೊಳಿ ಫೌಂಡೇಶನ್ನ ಬುದ್ಧ ವಿಹಾರದಲ್ಲಿ ನಡೆಯಿತು.
ಶಿಬಿರದಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 371ಜೆ ಕಲಂಗೆ ಸಂಬಂಧಿಸಿದ ಅಭ್ಯರ್ಥಿಗಳು ಹಾಗೂ ಆಸಕ್ತರು ಭಾಗವಹಿಸಿ, ಕಲಂನ ಉದ್ದೇಶ, ಅದರಡಿ ದೊರೆಯುವ ಸೌಲಭ್ಯಗಳು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಕಲ್ಪಿಸಿರುವ ವಿಶೇಷ ಮೀಸಲಾತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧ್ಯಯನ ನಡೆಸಿದರು.
ಕಲ್ಯಾಣ ಕರ್ನಾಟಕ ಪ್ರದೇಶವು ದಶಕಗಳಿಂದ ಎದುರಿಸುತ್ತಿರುವ ಹಿಂದುಳಿದಿರುವಿಕೆ ಹಾಗೂ ಅಭಿವೃದ್ಧಿಯ ಅಸಮತೋಲನವನ್ನು ನಿವಾರಿಸುವ ಉದ್ದೇಶದಿಂದ 371ಜೆ ಕಲಂ ಜಾರಿಗೆ ಬಂದಿದ್ದು, ಇದರ ಸದುಪಯೋಗವನ್ನು ಅರ್ಹ ಅಭ್ಯರ್ಥಿಗಳು ಪಡೆದುಕೊಳ್ಳುವ ಅಗತ್ಯವಿದೆ ಎಂದು ಶಿಬಿರದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಕಲಬುರಗಿ, ಬೀದರ್, ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಅಭ್ಯರ್ಥಿಗಳು ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, 371ಜೆ ಕಲಂನ ಅನುಷ್ಠಾನದಲ್ಲಿರುವ ಅವಕಾಶಗಳು, ಸವಾಲುಗಳು ಹಾಗೂ ಅಭ್ಯರ್ಥಿಗಳಿಗೆ ದೊರೆಯಬೇಕಾದ ಹಕ್ಕುಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು.
ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು, ವಿವಿಧ ಜಿಲ್ಲೆಗಳ ಪ್ರತಿನಿಧಿಗಳು, ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.




