ಬಿಜೆಪಿಯ ರಾಜಕೀಯ ರಣಕಹಳೆ ಶುರು – ಕಾಂಗ್ರೆಸ್ ಗೆ ದೊಡ್ಡ ಸಂಕಷ್ಟ!

ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮತ್ತೊಮ್ಮೆ ರಾಜಕೀಯ ರಣಗಾಳಿ ಎದ್ದಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿಚಾರವನ್ನು ಮುನ್ನೆಲೆಗೆ ತಂದು, ಬಿಜೆಪಿ ಯುವ ಮೋರ್ಚಾ ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಎಸ್ ‘ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಪಟ್ಟು ಹಿಡಿದು ಯುವ ಮೋರ್ಚಾ ಮುಖಂಡರು ಭರ್ಜರಿ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕರು ಏನೆಲ್ಲಾ ಆರೋಪ ಮಾಡಿದ್ದಾರೆ ಅಂತ ಈ ವರದಿಯಲ್ಲಿ ನೋಡೋಣ ಬನ್ನಿ!

ವಿಷಯ ಏನು ಅಂದ್ರೆ, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಜಗದೀಶ್ ಆರ್. ಚಂದ್ರ ನೇತೃತ್ವದಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದ ಕೇಸ್ ಈಗಲೂ ನಡೆಯುತ್ತಿದೆ, ಹಿಂದೆ ರಾಜೀನಾಮೆ ನೀಡಿದ್ದವರಿಗೆ ಮತ್ತೆ ಮಂತ್ರಿಸ್ಥಾನ ನೀಡಿರೋದು ಸರಿಯಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲ, ನಾಗೇಂದ್ರ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ‘ಧೀರಜ್ ಮುನಿರಾಜು’ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಅಂತ ಸರ್ಕಾರಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.”

ಇದೇ ವೇಳೆ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧವೂ ಜಗದೀಶ್ ಆರ್. ಚಂದ್ರ ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರ ರೈತರು, ವಿದ್ಯಾರ್ಥಿಗಳು ಮತ್ತು ಮಹಿಳೆಯರ ಪರವಾಗಿಲ್ಲ ಅಂತ ಆರೋಪಿಸಿದ ಅವರು, ಸಂಪುಟದಲ್ಲಿ ಒಬ್ಬ ಮಹಿಳೆಗೂ ಸಚಿವ ಸ್ಥಾನ ನೀಡಿಲ್ಲ ಎಂದು ಟೀಕಿಸಿದ್ದಾರೆ.

ಧಾರವಾಡದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆದರೂ ಯಾರೂ ಸ್ಪಂದಿಸುವುದಿಲ್ಲ, ಆದರೆ ದೆಹಲಿಗೆ ಮಾತ್ರ ಮುಖ್ಯಮಂತ್ರಿಗಳು ಓಡಿಹೋಗುತ್ತಾರೆ ಅಂತ ವ್ಯಂಗ್ಯವಾಡಿದ್ದಾರೆ. ಇದು ಕಂಪ್ಲೀಟ್ ಹೈಕಮಾಂಡ್ ಕಮಾಂಡ್ ಕೇಳುವ ದುರ್ಬಲ ಸರ್ಕಾರ ಅಂತ ಟೀಕಿಸಿದ್ದಾರೆ.

ಹಾಗೆಯೇ ಸಚಿವ ಸಂಪುಟ ಖಾತೆ ಹಂಚಿಕೆಯಲ್ಲಿ ಆಗಿರುವ ವಿಳಂಬದಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಮತ್ತು ರಾಜ್ಯದ ಅಭಿವೃದ್ಧಿ ಸಂಪೂರ್ಣವಾಗಿ ನೆಲಕಚ್ಚಿದೆ ಎಂದು ದೂರಿದ್ದಾರೆ. ಈ ಪ್ರತಿಭಟನೆಯಲ್ಲಿ ಯುವ ಮೋರ್ಚಾ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಯತಿನ್ ವೆಂಕಟೇಶ್ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.

ಒಟ್ಟಾರೆಯಾಗಿ ವಾಲ್ಮೀಕಿ ನಿಗಮದ ಬಿಸಿ ಈಗ ಮತ್ತೊಮ್ಮೆ ರಾಜ್ಯ ರಾಜಕಾರಣದಲ್ಲಿ ಸಕತ್ ಸದ್ದು ಮಾಡ್ತಿದೆ ಅಂತ ಹೇಳಬಹುದು!

About The Author