ರಾಜ್ಯದಲ್ಲಿ ಮತ್ತೊಮ್ಮೆ ವರುಣನ ಅಬ್ಬರ – ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆ ಮುನ್ಸೂಚನೆ!

ಬಿಸಿಲು-ಮಳೆಯ ಆಟದ ಮಧ್ಯೆ ರಾಜ್ಯದಲ್ಲಿ ಮತ್ತೊಮ್ಮೆ ವರುಣದೇವನ ಆರ್ಭಟ ಜೋರಾಗಲಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಇತ್ತೀಚಿನ ಅಪ್ಡೇಟ್ ಪ್ರಕಾರ, ಆಗಸ್ಟ್ 13 ಹಾಗೂ 14 ರಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವರುಣನ ಕೃಪೆ ಹೆಚ್ಚಿರಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಆಗಸ್ಟ್ 13 ಮತ್ತು 14 ರಂದು ಗುಡುಗು, ಸಿಡಿಲು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರಾವಳಿ ತೀರದಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಂಭವವಿರುವುದರಿಂದ, ಮೀನುಗಾರರು ಕಡ್ಡಾಯವಾಗಿ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಇನ್ನು ಸಿಲಿಕಾನ್ ಸಿಟಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಹಾಸನ ಮತ್ತು ತುಮಕೂರು ಸೇರಿದಂತೆ ಇತರೆಡೆ ಆಗಸ್ಟ್ 13 ರಂದು ಮೋಡಕವಿದ ವಾತಾವರಣದೊಂದಿಗೆ ಜಿಟಿಜಿಟಿ ಅಥವಾ ಹಗುರ ಮಳೆಯಾಗುವ ನಿರೀಕ್ಷೆಯಿದೆ. ಆಗಸ್ಟ್ 14 ರ ವೇಳೆಗೆ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಲಿದ್ದು, ಆದರೂ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆ ಮುಂದುವರಿಯಲಿದೆ.

ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲೂ ಚದುರಿದಂತೆ ಸಾಧಾರಣ ಮಳೆ ಹಾಗೂ ಗಾಳಿ ಬೀಸುವ ಸಂಭವವಿದೆ. ಒಟ್ಟಾರೆಯಾಗಿ ಮಳೆಯ ಅಬ್ಬರ ಹೆಚ್ಚಿರುವ ಕಡೆಗಳಲ್ಲಿ ಸಾರ್ವಜನಿಕರು ಹಾಗೂ ಪ್ರಯಾಣಿಕರು ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವುದು ಉತ್ತಮ.

About The Author