ರಾಜ್ಯದ ಹೋಟೆಲ್‌ಗಳ ಮೇಲಿನ ಸರಣಿ ದಾಳಿ ಹಾಗೂ ತಪಾಸಣೆಯ ಬೆನ್ನಲ್ಲೇ, ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ವಾಸಿಸುವ ಹಾಸ್ಟೆಲ್‌ಗಳು ಹಾಗೂ ಪಿಜಿಗಳ ಸರದಿ ಬಂದಿದೆ. ಆಹಾರದ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ಕಾಪಾಡುವ ನಿಟ್ಟಿನಲ್ಲಿ, ರಾಜ್ಯದ ಎಲ್ಲಾ ಹಾಸ್ಟೆಲ್‌ಗಳು ಮತ್ತು ಪಿಜಿಗಳಲ್ಲಿ ಕಡ್ಡಾಯ ಆಹಾರ ತಪಾಸಣೆ ನಡೆಸುವಂತೆ ಆರೋಗ್ಯ ಸಚಿವರು ಅಧಿಕೃತವಾಗಿ ಸೂಚನೆ ನೀಡಿದ್ದಾರೆ.
ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸರ್ಕಾರಿ ಹಾಸ್ಟೆಲ್‌ಗಳು, ಖಾಸಗಿ ಹಾಸ್ಟೆಲ್‌ಗಳು, ಸಹಕಾರಿ ಹಾಸ್ಟೆಲ್‌ಗಳು ಹಾಗೂ ಪಿಜಿ ವಲಯಗಳಲ್ಲಿ ವ್ಯಾಪಕ ತಪಾಸಣೆ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಕೇವಲ ಹಾಸ್ಟೆಲ್‌ಗಳಷ್ಟೇ ಅಲ್ಲದೆ, ವಿವಿಧ ಕ್ಯಾಟರಿಂಗ್ ಯುನಿಟ್‌ಗಳಲ್ಲೂ ಫುಡ್ ಟೆಸ್ಟ್ ಮಾಡಿಸುವುದಾಗಿ ತಿಳಿಸಿದ್ದು, ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗದೆ ಎಲ್ಲಾ ಜಿಲ್ಲಾ ಕೇಂದ್ರಗಳೂ ಎಚ್ಚೆತ್ತುಕೊಳ್ಳುವಂತೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ.
ಈ ತಪಾಸಣೆಯ ವೇಳೆ ಆಹಾರದ ಗುಣಮಟ್ಟ, ಅಡುಗೆ ಮನೆಯ ಸ್ವಚ್ಛತೆ ಹಾಗೂ ಕಚ್ಚಾ ಆಹಾರ ಪದಾರ್ಥಗಳ ಸಂಗ್ರಹಣೆಯ ವಿಧಾನವನ್ನು ಬಹಳ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ. ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಸಾರ್ವಜನಿಕರು ನೀಡುವ ಹಣಕ್ಕೆ ಯಾರೂ ಮೋಸ ಮಾಡಬಾರದು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸುವುದು ಕಂಡುಬಂದಲ್ಲಿ, ಅಂತಹವರ ವಿರುದ್ಧ ಯಾವುದೇ ಮುದಾಕ್ಷಿಣ್ಯವಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಸಚಿವರ ಈ ದಿಢೀರ್ ಹಾಗೂ ಕಠಿಣ ನಿರ್ಧಾರದಿಂದ ಪಿಜಿ ಮತ್ತು ಹಾಸ್ಟೆಲ್ ನಿರ್ವಾಹಕರಲ್ಲಿ ನಡುಕ ಹುಟ್ಟಿಸಿದ್ದು, ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುವವರ ವಿರುದ್ಧದ ಈ ಕಾರ್ಯಾಚರಣೆ ಮುಂದುವರಿಯಲಿದೆ.




