ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆಗಳು ನಡೆಯುತ್ತಿದ್ದು, ಸಾಕ್ಷಿಗಳ ವಿಚಾರಣೆ ವೇಳೆ ನಟ ದರ್ಶನ್ ನ್ಯಾಯಾಲಯದಲ್ಲಿ ಖುದ್ದು ಹಾಜರಿರಲು ಅನುಮತಿ ಕೋರಿ ಅರ್ಜಿ ಸಲ್ಲಿಸಿರುವುದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ದರ್ಶನ್ ಪರ ಹಿರಿಯ ವಕೀಲರಾದ ಹಷ್ಮತ್ ಪಾಷಾ ಅವರು ವಾದ ಮಂಡಿಸಿದ್ದು, ಸಾಕ್ಷಿಗಳ ವಿಚಾರಣೆ ಮತ್ತು ಪಾಟಿ ಸವಾಲಿನ ಸಮಯದಲ್ಲಿ ಕಕ್ಷಿದಾರರೊಂದಿಗೆ ನೇರವಾಗಿ ಚರ್ಚೆ ನಡೆಸುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಇದು ಅಸಾಧ್ಯವಾಗಿದ್ದು, ಅಲ್ಲಿ ಸರಿಯಾದ ಹೆಡ್‌ಫೋನ್ ವ್ಯವಸ್ಥೆಯೂ ಇಲ್ಲದಿರುವುದರಿಂದ, ಸಾಕ್ಷಿಗಳ ವಿಚಾರಣೆ ನಡೆಯುವ ಪ್ರಮುಖ ಸಂದರ್ಭದಲ್ಲಿ ದರ್ಶನ್ ನ್ಯಾಯಾಲಯದಲ್ಲಿ ಖುದ್ದು ಹಾಜರಿರಲು ಅವಕಾಶ ನೀಡಬೇಕು ಎಂದು ವಕೀಲರು ಕೋರಿದ್ದಾರೆ.
ಆದರೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಹಾಯಕ ಎಸ್‌ಪಿಪಿ (SPP) ಸಚಿನ್ ಅವರು, ಕಾನೂನಿನಲ್ಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಅವಕಾಶವಿರುವುದರಿಂದ ದರ್ಶನ್ ಖುದ್ದು ಬರುವ ಅಗತ್ಯವಿಲ್ಲ ಎಂದೂ, ಒಂದು ವೇಳೆ ಅವರು ಕೋರ್ಟ್‌ಗೆ ಬಂದರೆ ಸಾಕ್ಷಿಗಳ ಮೇಲೆ ಪರೋಕ್ಷ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದೂ ವಾದ ಮಂಡಿಸಿದ್ದಾರೆ.
ಉಭಯ ಪಕ್ಷಕಾರರ ವಾದಗಳನ್ನು ಆಲಿಸಿದ ನ್ಯಾಯಾಲಯವು, ಈ ಅರ್ಜಿ ಕುರಿತ ಅಂತಿಮ ಆದೇಶವನ್ನು ಆಗಸ್ಟ್ 17ಕ್ಕೆ ನಿಗದಿಪಡಿಸಿದ್ದು, ಕಳೆದ ಬಾರಿ ದರ್ಶನ್ ಕೋರ್ಟ್‌ಗೆ ಬಂದಾಗ ಉಂಟಾಗಿದ್ದ ಜನದಟ್ಟಣೆಯ ಹಿನ್ನೆಲೆಯಲ್ಲಿ ಈ ಬಾರಿಯ ಆದೇಶವು ತೀವ್ರ ಕುತೂಹಲ ಮೂಡಿಸಿದೆ.




