Dharwad News: ಪರಸಾಪುರ SC/ST ಕಾಲೋನಿಗಿಲ್ಲ ಮೂಲಭೂತ ಸೌಕರ್ಯ

Dharwad News: ಸರ್ಕಾರಗಳು ಬದಲಾಗುತ್ತಿವೆ, ಯೋಜನೆಗಳು ಬರುತ್ತಿವೆ… ಆದರೆ ಗ್ರಾಮೀಣ ಭಾಗದ ಜನರ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಪರಸಾಪುರ ಗ್ರಾಮದ ಅಂಬೇಡ್ಕರ್ ನಗರ SC/ST ಕಾಲೋನಿಯ ಅವ್ಯವಸ್ಥೆ ಇದಕ್ಕೆ ಸಾಕ್ಷಿಯಾಗಿದೆ. ರಸ್ತೆಯಿಲ್ಲ, ಗಟಾರ್ ವ್ಯವಸ್ಥೆಯಿಲ್ಲ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಇಲ್ಲಿನ ಜನರು ಸಂಕಷ್ಟದ ಜೀವನ ನಡೆಸುವಂತಾಗಿದೆ.

ಹಲವು ವರ್ಷಗಳಿಂದ ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಸರಿಯಾದ ರಸ್ತೆ ಇಲ್ಲ… ಗಟಾರ್ ವ್ಯವಸ್ಥೆ ಇಲ್ಲ… ವಿದ್ಯುತ್ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆ… ಹೀಗಾಗಿ ನಿವಾಸಿಗಳು ಪ್ರತಿನಿತ್ಯ ಪರದಾಡುವಂತಾಗಿದೆ. ಮಳೆಗಾಲದಲ್ಲಂತೂ ರಸ್ತೆಗಳು ಸಂಪೂರ್ಣ ಕೆಸರಿನಿಂದ ತುಂಬಿ, ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಓಡಾಡಲು ತೊಂದರೆ ಅನುಭವಿಸುತ್ತಿದ್ದಾರೆ.

ಸಮಸ್ಯೆ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ, “ಹಣವಿಲ್ಲ, ಸ್ಕೀಮ್ ಬಂದಿಲ್ಲ, ಸ್ಕೀಮ್ ಬಂದರೆ ಮಾಡಿಸುತ್ತೇವೆ” ಎಂಬ ಉತ್ತರ ನೀಡಲಾಗುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಲೋನಿಯ ನಿವಾಸಿಗಳ ಸಮಸ್ಯೆ ಆಲಿಸಿದ ಕರ್ನಾಟಕ ದಲಿತ ವಿಮೋಚನಾ ಸಮಿತಿ ಮುಖಂಡರು, ಮೂಲಭೂತ ಸೌಕರ್ಯ ಕಲ್ಪಿಸುವಂತೆ ಹಲವು ಬಾರಿ ಒತ್ತಾಯಿಸಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.

ಸರ್ಕಾರದಿಂದ ದೊರೆಯಬೇಕಾದ ಕನಿಷ್ಠ ಸೌಲಭ್ಯಗಳಿಗಾಗಿ ಜನರು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ ಎಂದು ಮುಖಂಡರು ಹೇಳಿದ್ದಾರೆ.

ಒಂದೆಡೆ ಸರ್ಕಾರ ಗ್ರಾಮೀಣ ಅಭಿವೃದ್ಧಿ ಹಾಗೂ SC/ST ಕಾಲೋನಿಗಳ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದೆ. ಮತ್ತೊಂದೆಡೆ ಪರಸಾಪುರದ ಅಂಬೇಡ್ಕರ್ ನಗರ ನಿವಾಸಿಗಳು ಮೂಲಭೂತ ಸೌಕರ್ಯಗಳಿಗಾಗಿ ಇನ್ನೂ ಕಾದು ಕುಳಿತಿದ್ದಾರೆ. ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿ, ರಸ್ತೆ, ಗಟಾರ್ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕಿದೆ.

ಕ್ಯಾಮೆರಾ ಪರ್ಸನ್ ಹೇಮಂತ್ ಜೊತೆ, ಸಂಗಮೇಶ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ.

About The Author