ಜಲಾಶಯಗಳಿಗೆ ಭರ್ಜರಿ ಒಳಹರಿವು – ರೈತರಿಗೆ ಖುಷಿ, ನದಿ ತೀರದ ಜನರಿಗೆ ಅಲರ್ಟ್!

ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಜೋರಾಗಿದ್ದು, ಕಾವೇರಿ ಹಾಗೂ ಕೃಷ್ಣಾ ನದಿ ಪಾತ್ರದ ಜಲಾಶಯಗಳು ಭರ್ತಿಯಾಗುತ್ತಿವೆ. ರೈತರಲ್ಲಿ ಮಂದಹಾಸ ಮೂಡಿದ್ದರೂ, ನದಿ ತೀರದ ಜನರಿಗೆ ಮಾತ್ರ ಜಿಲ್ಲಾಡಳಿತದಿಂದ ಬಿಗ್ ಅಲರ್ಟ್ ಘೋಷಿಸಲಾಗಿದೆ. ಯಾವೆಲ್ಲಾ ಜಲಾಶಯಗಳು ತುಂಬಿವೆ? ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ? ಅದರ ಆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.

ಹೌದು, ರಾಜ್ಯದ ಪ್ರಮುಖ ಅಣೆಕಟ್ಟುಗಳಿಗೆ ಭಾರೀ ಪ್ರಮಾಣದ ನೀರು ಹರಿದುಬರುತ್ತಿದೆ. ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿ ಜಲಾಶಯದಲ್ಲಿ ಈಗ ಬರೋಬ್ಬರಿ 120 ಟಿಎಂಸಿಗೂ ಅಧಿಕ ನೀರು ಸಂಗ್ರಹವಾಗಿದ್ದು, ಶೇ. 97ರಷ್ಟು ಭರ್ತಿಯಾಗಿದೆ. ಇನ್ನು ನಾರಾಯಣಪುರ ಹಾಗೂ ಭೀಮಾ ಲಿಫ್ಟ್ ಜಲಾಶಯಗಳು ಶೇ. 100ರಷ್ಟು ಅಂದರೆ ಸಂಪೂರ್ಣ ಭರ್ತಿಯಾಗಿವೆ.

ಕೊಡಗು ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಹಾರಂಗಿ ಅಣೆಕಟ್ಟು ಶೇ. 97ರಷ್ಟು ತುಂಬಿದ್ದರೆ, ಹಿಡಕಲ್ ಜಲಾಶಯ ಕೂಡ ಗರಿಷ್ಠ ಮಟ್ಟದತ್ತ ಸಾಗಿದೆ. ಇನ್ನು ಮಂಡ್ಯದ KRS ಡ್ಯಾಂನಲ್ಲಿ ನೀರಿನ ಮಟ್ಟ ಶೇ. 63ರಷ್ಟಿದ್ದು, ಒಳಹರಿವು ಹಂತ ಹಂತವಾಗಿ ಏರಿಕೆಯಾಗುತ್ತಿದೆ. ಹೇಮಾವತಿ ಹಾಗೂ ತುಂಗಭದ್ರಾ ಜಲಾಶಯಗಳಲ್ಲೂ ನೀರಿನ ಸಂಗ್ರಹ ಉತ್ತಮವಾಗಿದ್ದು, ರೈತರು ಖುಷಿಯಾಗಿದ್ದಾರೆ.

ಆದರೆ ಜಲಾಶಯಗಳು ಭರ್ತಿಯಾಗ್ತಿರೋದ್ರಿಂದ, ಯಾವುದೇ ಕ್ಷಣದಲ್ಲಾದರೂ ನದಿಗಳಿಗೆ ಹೆಚ್ಚುವರಿ ನೀರನ್ನು ಹೊರಬಿಡುವ ಸಾಧ್ಯತೆಯಿದೆ. ಹಾಗಾಗಿ ಕೃಷ್ಣಾ, ಕಾವೇರಿ, ತುಂಗಭದ್ರಾ ಹಾಗೂ ಭೀಮಾ ನದಿ ತೀರದ ತಗ್ಗು ಪ್ರದೇಶಗಳಲ್ಲಿರುವ ನಿವಾಸಿಗಳು, ಮೀನುಗಾರರು ಮತ್ತು ಜಾನುವಾರುಗಳನ್ನು ಮೇಯಿಸಲು ಹೋಗುವವರು ಯಾರೂ ಕೂಡ ನದಿಗೆ ಇಳಿಯದಂತೆ ಜಿಲ್ಲಾಡಳಿತಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿವೆ.

ರೈತರ ಪಾಲಿಗೆ ಜಲಾಶಯಗಳು ತುಂಬುತ್ತಿರುವುದು ಒಳ್ಳೆಯ ಸುದ್ದಿಯಾದರೂ, ನದಿ ತೀರದ ಜನರು ಮಾತ್ರ ತುಸು ಎಚ್ಚರಿಕೆಯಿಂದ ಇರೋದು ತುಂಬಾ ಅವಶ್ಯಕ.

About The Author