ಚಿನ್ನದ ದರದಲ್ಲಿ ಭಾರೀ ಜಿಗಿತ – ಇಂದಿನ ರೇಟ್ ಎಷ್ಟು ಗೊತ್ತಾ?

ಚಿನ್ನ ಹಾಗೂ ಬೆಳ್ಳಿ ಖರೀದಿಸಬೇಕು ಅಂತ ಯೋಚ್ನೆ ಮಾಡ್ತಿರೋರಿಗೆ ಮಾರುಕಟ್ಟೆಯಿಂದ ಮತ್ತೊಂದು ಬಿಗ್ ಶಾಕ್ ಎದುರಾಗಿದೆ! ಕಳೆದ ವಾರವೆಲ್ಲ ನಿರಂತರವಾಗಿ ಏರಿಕೆ ಕಂಡುಬಂದಿದ್ದ ಬಂಗಾರದ ಬೆಲೆ, ಶುಕ್ರವಾರದ ವಹಿವಾಟಿನಲ್ಲಿ ಒಮ್ಮೆಲೆ ಕುಸಿದು ಗ್ರಾಹಕರಿಗೆ ದೊಡ್ಡ ಸಮಾಧಾನ ತಂದಿತ್ತು. ಆದರೆ ಆ ನೆಮ್ಮದಿ ಕೇವಲ ಒಂದೇ ದಿನಕ್ಕೆ ಸೀಮಿತವಾಗಿದ್ದು, ಇಂದಿನ ವಹಿವಾಟಿನಲ್ಲಿ ಗೋಲ್ಡ್ ಹಾಗೂ ಸಿಲ್ವರ್ ರೇಟ್ ಮತ್ತೆ ಭಾರೀ ಏರಿಕೆ ಕಂಡಿದೆ. ಇವತ್ತಿನ ಮಾರುಕಟ್ಟೆ ದರದ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಹೌದು, ಅಮೆರಿಕದ ಆರ್ಥಿಕತೆಯ ಬೆಳವಣಿಗೆಗಳು, ಜಾಗತಿಕ ಮಾರುಕಟ್ಟೆಯಲ್ಲಿ ಬಡ್ಡಿದರ ಕುರಿತ ನಿರೀಕ್ಷೆಗಳು ಹಾಗೂ ಮಧ್ಯಪ್ರಾಚ್ಯದಲ್ಲಿನ ಅಸ್ಥಿರತೆಯ ಪರಿಸ್ಥಿತಿ ನೇರವಾಗಿ ಚಿನ್ನದ ದರದ ಮೇಲೆ ಪ್ರಭಾವ ಬೀರುತ್ತಿದೆ. ಜಾಗತಿಕವಾಗಿ ಅನಿಶ್ಚಿತತೆ ಹೆಚ್ಚಾದಾಗಲೆಲ್ಲಾ ಹೂಡಿಕೆದಾರರು ಚಿನ್ನವನ್ನು ಅತ್ಯಂತ ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸುವುದರಿಂದ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿ ದೇಶೀಯ ಮಾರುಕಟ್ಟೆಯಲ್ಲೂ ದರ ಮೇಲೇರುತ್ತಿದೆ.

ಇಂದಿನ ಚಿನ್ನದ ಮಾರುಕಟ್ಟೆ ದರ ನೋಡುವುದಾದರೆ – ನಮ್ಮ ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ ಗ್ರಾಂಗೆ ಸುಮಾರು 71 ರೂಪಾಯಿಯಷ್ಟು ಏರಿಕೆಯಾಗಿದ್ದು, 10 ಗ್ರಾಂಗೆ ಬರೋಬ್ಬರಿ 1,55,130 ರೂಪಾಯಿಗಳನ್ನು ಮುಟ್ಟಿದೆ! ಇನ್ನು ಆಭರಣ ಪ್ರಿಯರು ಸಾಮಾನ್ಯವಾಗಿ ಬಳಸುವ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ 65 ರೂ. ಏರಿಕೆಯಾಗಿ, 10 ಗ್ರಾಂಗೆ 1,42,200 ರೂಪಾಯಿಗಳಿಗೆ ತಲುಪಿದೆ. ಇನ್ನು ಬೆಳ್ಳಿಯ ವಿಚಾರಕ್ಕೆ ಬರುವುದಾದರೆ, ಲೋಹಗಳ ರಾಜ ಎಂದೇ ಕರೆಯಲ್ಪಡುವ ಬೆಳ್ಳಿ ಬೆಲೆ ಕೂಡ ಏರಿಕೆ ಹಾದಿಯಲ್ಲಿದ್ದು, ಬೆಂಗಳೂರು ಮತ್ತು ಮುಂಬೈ ಮಾರುಕಟ್ಟೆಯಲ್ಲಿ 1 ಗ್ರಾಂ ಬೆಳ್ಳಿ ಬೆಲೆ 255 ರೂಪಾಯಿಗಳ ಆಸುಪಾಸಿನಲ್ಲಿದೆ.

ಒಟ್ಟಿನಲ್ಲಿ ಒಂದು ದಿನ ದರ ಇಳಿಕೆಯಾಗಿ ಗ್ರಾಹಕರಿಗೆ ಸಿಕ್ಕಿದ್ದ ಸಣ್ಣ ನಿರಾಳತೆ ಈಗ ಮಾಯವಾಗಿದೆ. ಮಾರುಕಟ್ಟೆಯ ಏರಿಳಿತಗಳು ಹೀಗೆಯೇ ಮುಂದುವರಿಯುತ್ತಿರುವುದರಿಂದ, ನೀವೇನಾದರೂ ಮದುವೆ ಅಥವಾ ಶುಭ ಸಮಾರಂಭಗಳಿಗಾಗಿ ಚಿನ್ನ ಅಥವಾ ಬೆಳ್ಳಿ ಖರೀದಿಸಲು ಯೋಚಿಸುತ್ತಿದ್ದರೆ, ದರಗಳನ್ನು ನಿರಂತರವಾಗಿ ಗಮನಿಸಿ ಮುಂದುವರಿಯುವುದು ಉತ್ತಮ.

About The Author