ರಾಷ್ಟ್ರಧ್ವಜ ಹಾರಿಸುವ ವಿಚಾರದಲ್ಲಿ ಬಿಜೆಪಿ ಮಾಡುತ್ತಿರುವ ಟೀಕೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಖಡಕ್ ತಿರುಗೇಟು ನೀಡಿದ್ದಾರೆ. “ನಾನು ಮೊದಲು ಭಾರತೀಯ, ನಂತರ ಕನ್ನಡಿಗ, ಕೊನೆಗೆ ಮುಸ್ಲಿಂ” ಎಂದು ಹೇಳಿರುವ ಜಮೀರ್, ದೇಶಭಕ್ತಿ ಮತ್ತು ರಾಷ್ಟ್ರಪ್ರೇಮವನ್ನು ಬಿಜೆಪಿಯಿಂದ ಕಲಿಯುವ ಅಗತ್ಯ ನಮಗಿಲ್ಲ ಎಂದು ಗುಡುಗಿದ್ದಾರೆ. ಅಷ್ಟಕ್ಕೂ ಜಮೀರ್ ಹೇಳಿದ್ದೇನು? ವಿಜಯನಗರ ಜಿಲ್ಲಾ ಉಸ್ತುವಾರಿ ಬದಲಾವಣೆಯ ಹಿಂದಿನ ಕಾರಣವೇನು? ಈಗ ನೋಡೋಣ..
ಎಸ್ ‘ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಧ್ವಜ ಹಾರಿಸುವ ವಿಚಾರವೇ ಈಗ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಚಾಮರಾಜಪೇಟೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್, ಬಿಜೆಪಿ ನಾಯಕರ ಟೀಕೆಗೆ ತೀವ್ರ ತಿರುಗೇಟು ನೀಡಿದ್ದಾರೆ. ರಾಷ್ಟ್ರಧ್ವಜ ಹಾರಿಸುವುದು ಪ್ರತಿಯೊಬ್ಬ ಭಾರತೀಯನಿಗೂ ಸಿಗುವ ದೊಡ್ಡ ಸೌಭಾಗ್ಯ. ಈ ವಿಚಾರದಲ್ಲಿ ಬಿಜೆಪಿ ಅನಗತ್ಯವಾಗಿ ಕೀಳು ರಾಜಕೀಯ ಮಾಡುತ್ತಿದೆ ಎಂದು ಜಮೀರ್ ಅಹ್ಮದ್ ಅವ್ರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಇದರ ಜೊತೆಗೆ ‘ವಿಜಯನಗರ ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡಲು ಜಮೀರ್ ನಿರಾಕರಿಸಿದ್ದಾರೆ ಎಂಬ ಆರೋಪಕ್ಕೂ ಅವರು ಸ್ಪಷ್ಟನೆ ನೀಡಿದ್ದಾರೆ. ಹೌದು ‘ತಾವು ಸತತ ಮೂರು ವರ್ಷಗಳ ಕಾಲ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಧ್ವಜಾರೋಹಣ ಮಾಡಿದ್ದಾಗಿ ಹೇಳಿರುವ ಜಮೀರ್, ಇಲಾಖೆಯ ಕೆಲಸದ ಒತ್ತಡ ಹೆಚ್ಚಿರುವುದರಿಂದ ಜಿಲ್ಲೆಗೆ ಪೂರ್ಣ ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ. ಇದೇ ಕಾರಣಕ್ಕೆ ಹಿಂದಿನ ಮುಖ್ಯಮಂತ್ರಿ, ಸಿದ್ದರಾಮಯ್ಯ ಅವರ ಅವಧಿಯಲ್ಲೇ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯಿಂದ ತಮ್ಮನ್ನು ಮುಕ್ತಗೊಳಿಸುವಂತೆ ಮನವಿ ಮಾಡಿದ್ದೆ!
ಅಷ್ಟೇ ಅಲ್ಲ, ಹೊಸದಾಗಿ ಸಚಿವರಾಗಿರುವ ಬಸವಂತಪ್ಪ ಅವರಿಗೆ ವಿಜಯನಗರ ಜಿಲ್ಲಾ ಉಸ್ತುವಾರಿ ನೀಡುವಂತೆ ತಾವೇ ನೂತನ ಮುಖ್ಯಮಂತ್ರಿ ಡಿಕೆಶಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೆ! ಹೊಸದಾಗಿ ಸಚಿವರಾದವರಿಗೆ ಜಿಲ್ಲಾ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವದಂದು ಧ್ವಜಾರೋಹಣ ಮಾಡುವ ಅವಕಾಶ ಸಿಗಬೇಕು. ಇದೇ ಉದ್ದೇಶದಿಂದ ಬಸವಂತಪ್ಪ ಅವರಿಗೆ ಅವಕಾಶ ನೀಡಲಾಗಿದೆ. ಇದರಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಜಮೀರ್ ಸ್ಪಷ್ಟಪಡಿಸಿದರು!
ಇದೇ ವೇಳೆ ಬಿಜೆಪಿಯ ಮೂಲ ಸಂಸ್ಥೆಗಳ ಸ್ವಾತಂತ್ರ್ಯ ಹೋರಾಟದ ಪಾತ್ರದ ಬಗ್ಗೆಯೂ ಪ್ರಶ್ನೆ ಎತ್ತಿರುವ ಜಮೀರ್, ದೇಶಭಕ್ತಿಯ ಪಾಠವನ್ನು ಬಿಜೆಪಿಯಿಂದ ಕಲಿಯುವ ಅಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ. ತಾವು ಭಾರತೀಯ ಎಂಬ ಹೆಮ್ಮೆ ಹೊಂದಿದ್ದು, ಜಿಲ್ಲಾ ಕೇಂದ್ರದಲ್ಲಿ ಮಾತ್ರವಲ್ಲ, ತಮ್ಮ ಸ್ವಕ್ಷೇತ್ರ ಚಾಮರಾಜಪೇಟೆಯಲ್ಲೂ ಹೆಮ್ಮೆಯಿಂದ ರಾಷ್ಟ್ರಧ್ವಜ ಹಾರಿಸಿದ್ದೇನೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, ರಾಷ್ಟ್ರಧ್ವಜ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಶುರುವಾಗಿದ್ದ ರಾಜಕೀಯ ಗೊಂದಲಕ್ಕೆ ಜಮೀರ್ ಅಹ್ಮದ್ ಖಾನ್ ತಮ್ಮದೇ ಶೈಲಿಯಲ್ಲಿ ಸ್ಪಷ್ಟನೆ ನೀಡಿದ್ದು, “ಮೊದಲು ಭಾರತೀಯ, ನಂತರ ಕನ್ನಡಿಗ, ಕೊನೆಗೆ ಮುಸ್ಲಿಂ” ಎಂಬ ಅವರ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.




