ಮುಂದಿನ 7 ದಿನಗಳ ರಾಜ್ಯ ಹವಾಮಾನ ವರದಿ – ಯಾವ ಜಿಲ್ಲೆಯಲ್ಲಿ ಹೇಗಿರಲಿದೆ ವಾತಾವರಣ?

ರಾಜ್ಯದಲ್ಲಿ ಮುಂಗಾರು ಮಳೆಯ ಚಟುವಟಿಕೆಗಳು ಸಂಪೂರ್ಣವಾಗಿ ದುರ್ಬಲಗೊಂಡಿದ್ದು, ಮಳೆಯ ಅನಿಶ್ಚಿತತೆಯು ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ. ಸಾವಿರಾರು ಮೈಲಿ ದೂರದ ಯುರೋಪ್ ಖಂಡದಲ್ಲಿ ನಡೆಯುತ್ತಿರುವ ಹವಾಮಾನ ಬದಲಾವಣೆಗಳು ಇದಕ್ಕೆ ಪ್ರಮುಖ ಕಾರಣವೆಂದು ತಜ್ಞರು ವಿಶ್ಲೇಷಿಸಿದ್ದಾರೆ. ಯುರೋಪ್‌ನಲ್ಲಿ ತಾಪಮಾನವು 37 ಡಿಗ್ರಿಗಿಂತ ಹೆಚ್ಚಾಗಿದ್ದು, ಅಲ್ಲಿಂದ ಅರಬ್ಬಿ ಸಮುದ್ರದ ಕಡೆಗೆ ಬೀಸುತ್ತಿರುವ ಶುಷ್ಕ ಗಾಳಿಯ ಪ್ರಭಾವದಿಂದಾಗಿ ಕರ್ನಾಟಕದಲ್ಲಿ ಮಳೆ ಮರೆಯಾಗುತ್ತಿದೆ.

ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ವರದಿಯ ಪ್ರಕಾರ, ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಆಗಸ್ಟ್ 24ರವರೆಗೆ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಆ ಬಳಿಕ ಈ ಪ್ರದೇಶಗಳಲ್ಲಿ ಬಿಸಿಲಿನ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನು ಮಲೆನಾಡು ಭಾಗವಾದ ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅಲ್ಲಲ್ಲಿ ಕೆಲವೊಮ್ಮೆ ತುಂತುರು ಮಳೆ ಬಿಟ್ಟರೆ, ಹೆಚ್ಚಿನ ಕಡೆಗಳಲ್ಲಿ ಬಿಸಿಲು ಹಾಗೂ ಮೋಡ ಕವಿದ ವಾತಾವರಣವೇ ಮುಂದುವರಿಯಲಿದೆ. ಈ ಪ್ರದೇಶಗಳಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಬಾರದಿರುವುದು ಬೆಳೆಗಳಿಗೆ ನೀರಿನ ಕೊರತೆಯುಂಟು ಮಾಡುವ ಆತಂಕ ತಂದಿದೆ.

ಉತ್ತರ ಹಾಗೂ ದಕ್ಷಿಣ ಒಳನಾಡಿನ ವಾತಾವರಣವು ಭಿನ್ನವಾಗಿದ್ದು, ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಆರಂಭದಲ್ಲಿ ಒಣ ಹವೆ ಕಂಡುಬಂದು ಆ ಬಳಿಕ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಇತ್ತ ದಕ್ಷಿಣ ಒಳನಾಡಿನ ಬೆಂಗಳೂರು, ಮೈಸೂರು, ಮಂಡ್ಯ, ಹಾಸನ ಸೇರಿದಂತೆ ಹಲವೆಡೆ ಗುಡುಗು-ಮಿಂಚು ಹಾಗೂ ಬಿರುಗಾಳಿ ಸಹಿತ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಮಳೆಯ ಪ್ರಮಾಣ ಕೆಲವೆಡೆ ಕಡಿಮೆಯಿದ್ದರೂ ಗಾಳಿಯ ವೇಗ ಹೆಚ್ಚಿರಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಉತ್ತರ ಒಳನಾಡಿನಲ್ಲಿ 40 ರಿಂದ 50 ಕಿ.ಮೀ ಹಾಗೂ ದಕ್ಷಿಣ ಒಳನಾಡಿನಲ್ಲಿ 30 ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಸಾರ್ವಜನಿಕರು ಹಾಗೂ ರೈತರು ಎಚ್ಚರಿಕೆಯಿಂದಿರುವುದು ಬಹಳ ಅವಶ್ಯವಾಗಿದೆ.

About The Author