ಭಾರಿ ಮಳೆ ಎಚ್ಚರಿಕೆ ಕೊಟ್ಟ IMD – 16 ಜಿಲ್ಲೆಗಳ ರೈತರೇ ಎಚ್ಚರ!

ರಾಜ್ಯದಲ್ಲಿ ಮಳೆಯ ಮುನ್ಸೂಚನೆ ಇದ್ದರೂ, ಬಿಸಿಲಿನ ಬೇಗೆ ಮಾತ್ರ ಜನರನ್ನು ಹೈರಾಣಾಗಿಸಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಸೇರಿದಂತೆ 16 ಜಿಲ್ಲೆಗಳಲ್ಲಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಆದರೆ ಇದರ ನಡುವೆಯೂ ದಾಖಲೆ ಮಟ್ಟದಲ್ಲಿ ತಾಪಮಾನ ಏರಿಕೆಯಾಗಿರುವುದು ಆಶ್ಚರ್ಯ ತಂದಿದೆ ನೋಡಿ.

ಹೌದು, ವಾಡಿಕೆ ತಾಪಮಾನಕ್ಕಿಂತ ಬರೋಬ್ಬರಿ ಐದರಿಂದ ಆರು ಡಿಗ್ರಿವರೆಗೆ ತಾಪಮಾನ ಏರಿಕೆಯಾಗಿದೆ. ಕಲ್ಬುರ್ಗಿಯಲ್ಲಿ 37.4 ಡಿಗ್ರಿ, ಕೊಪ್ಪಳ ಹಾಗೂ ರಾಯಚೂರಿನಲ್ಲಿ 36 ಡಿಗ್ರಿ ಹಾಗೂ ವಿಜಯಪುರದಲ್ಲಿ 35 ಡಿಗ್ರಿವರೆಗೆ ಬಿಸಿಲಿನ ತೀವ್ರತೆ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 31.2 ಡಿಗ್ರಿ ಹಾಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಾಡಿಕೆಗಿಂತ ಸುಮಾರು 5 ಡಿಗ್ರಿಯಷ್ಟು ಅಧಿಕ ತಾಪಮಾನ ದಾಖಲಾಗಿರುವುದು ಕಂಡುಬಂದಿದೆ.

ಕಳೆದ ರಾತ್ರಿ ಬೆಂಗಳೂರಿನ ವಿಜಯನಗರ, ದೀಪಾಂಜಲಿನಗರ, ಚಂದ್ರಾಲೇಔಟ್ ಹಾಗೂ ಸುಂಕದಕಟ್ಟೆ ಸೇರಿದಂತೆ ವಿವಿಧಡೆ ಸಾಧಾರಣ ಮಳೆಯಾಗಿದೆ. ಇನ್ನು ಮುಂದಿನ ನಾಲ್ಕು ದಿನಗಳ ಕಾಲ ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗಲಿದ್ದು, ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಮತ್ತು ರಾಮನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮುಂದಿನ ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು, ಮಳೆ ಬಂದ ಬಳಿಕ ಬೆಂಗಳೂರು ಸೇರಿದಂತೆ ವಿವಿಧೆಡೆ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಸಿಯಸ್ ತನಕ ಕುಸಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಟ್ಟಿನಲ್ಲಿ ಬಿಸಿಲು ಹಾಗೂ ಮಳೆಯ ಹವಾಮಾನದ ಆಟ ಮುಂದುವರಿದಿದೆ ಎಂದೇ ಹೇಳಬಹುದು.

About The Author