ಕರ್ನಾಟಕ ರಾಜಕೀಯದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದೆ. ವಿಧಾನ ಪರಿಷತ್ತಿನ ಉಪ ಸಭಾಪತಿ ಹಾಗೂ ವಿಧಾನಸಭೆಯ ಉಪ ಸಭಾಧ್ಯಕ್ಷ ಸ್ಥಾನದ ಚುನಾವಣೆಗೆ ಆಡಳಿತರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸೋಮವಾರ ತಮ್ಮ ಅಧಿಕೃತ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಬನ್ನಿ, ಈ ಚುನಾವಣಾ ಕಣದಲ್ಲಿ ಯಾರಿಗೆ ಅವಕಾಶ ಸಿಕ್ಕಿದೆ ಅಂತ ನೋಡೋಣ!
ಮೊದಲನೆಯದಾಗಿ, ವಿಧಾನ ಪರಿಷತ್ತಿನ ಉಪ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಿರಿಯ ನಾಯಕಿ, ಮಾಜಿ ಸಚಿವೆ ಉಮಾಶ್ರೀ ಅವರು ವಿಧಾನ ಪರಿಷತ್ ಕಾರ್ಯದರ್ಶಿ ಜ್ಯೋತಿ ಅವರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದು ಉಮಾಶ್ರೀ ಅವರಿಗೆ ಶುಭ ಹಾರೈಸಿದರು.
ಇನ್ನೊಂದೆಡೆ, ವಿಧಾನಸಭೆಯ ಉಪ ಸಭಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸಚಿವ ಮಂಕಾಳು ವೈದ್ಯ ಅವರು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ತಮ್ಮ ನಾಮಪತ್ರವನ್ನು ಹಸ್ತಾಂತರಿಸಿದರು. ಮಂಕಾಳು ವೈದ್ಯ ಅವರ ನಾಮಪತ್ರ ಸಲ್ಲಿಕೆ ವೇಳೆಯೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು, ಶಾಸಕರು ಮತ್ತು ಪ್ರಮುಖ ರಾಜಕೀಯ ನಾಯಕರು ಸಾಥ್ ನೀಡಿ, ಬಲ ತುಂಬಿದರು.
ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರು ಹಾಗೂ ಹಿರಿಯರಿಗೆ ಈ ಪ್ರಮುಖ ಸಾಂವಿಧಾನಿಕ ಸ್ಥಾನಗಳು ಸಿಗುತ್ತಿರುವುದು ಪಕ್ಷದ ವಲಯದಲ್ಲಿ ಹೊಸ ಚರ್ಚೆಗೆ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಉಪಸಭಾಪತಿ ಹಾಗೂ ಉಪಸಭಾಧ್ಯಕ್ಷರ ಆಯ್ಕೆಯು ಮುಂದಿನ ದಿನಗಳಲ್ಲಿ ಅಧಿಕೃತಗೊಳ್ಳಲಿದ್ದು ಅಲ್ಲಿಯವರಿಗೆ ಕಾಯಬೇಕಿದೆ…




