ನಮ್ಮ ಕನ್ನಡ ಶಾಲೆ ಉಳಿಸಿ ಅಭಿಯಾನ ಅನುದಾನಕ್ಕಾಗಿ ಶಿಕ್ಷಕರ ಉಪವಾಸ ಸತ್ಯಾಗ್ರಹ

1995ರಿಂದ ಆರಂಭಗೊಂಡ ಕನ್ನಡ ಮಾಧ್ಯಮದ ಅನುದಾನ ರಹಿತ ಶಾಲಾ-ಕಾಲೇಜುಗಳಿಗೆ ಸರ್ಕಾರ ಅನುದಾನ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನ ರಹಿತ ಶಾಲಾ-ಕಾಲೇಜು ಮಂಡಳಿ ಹಾಗೂ ನೌಕರರ ಒಕ್ಕೂಟದ ವತಿಯಿಂದ ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು.

‘ನಮ್ಮ ಕನ್ನಡ ಶಾಲೆ ಉಳಿಸಿ ಅಭಿಯಾನ’ದಡಿ ನಡೆದ ಪ್ರತಿಭಟನೆಯಲ್ಲಿ ನೂರಾರು ಶಿಕ್ಷಕರು ಹಾಗೂ ನೌಕರರು ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 1995ರಿಂದ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಶಾಲಾ-ಕಾಲೇಜುಗಳನ್ನು ಅನುದಾನದ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳದಲ್ಲಿ “ಬೇಕೇ ಬೇಕು, ಅನುದಾನ ಬೇಕು”, “ಶಿಕ್ಷಣ ಸಚಿವರು ಬರಲೇಬೇಕು” ಎಂಬ ಘೋಷಣೆಗಳನ್ನು ಕೂಗಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು. ಹಲವು ವರ್ಷಗಳಿಂದ ಕನ್ನಡ ಮಾಧ್ಯಮದ ಶಾಲಾ-ಕಾಲೇಜುಗಳು ಅನುದಾನವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಕರು ಮತ್ತು ನೌಕರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕನ್ನಡ ಮಾಧ್ಯಮದ ಶಿಕ್ಷಣ ಸಂಸ್ಥೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಂಡು, 1995ರಿಂದ ಆರಂಭಗೊಂಡ ಅರ್ಹ ಶಾಲಾ-ಕಾಲೇಜುಗಳಿಗೆ ಅನುದಾನ ಮಂಜೂರು ಮಾಡಬೇಕು. ಜೊತೆಗೆ ಅಲ್ಲಿನ ಶಿಕ್ಷಕರು ಹಾಗೂ ನೌಕರರ ಸೇವಾ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಿಕ್ಷಣ ಸಚಿವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸುವ ಎಚ್ಚರಿಕೆ ನೀಡಿದರು.

About The Author