ದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ವಿಸ್ತರಿಸಲು ಮತ್ತು ಆರೋಗ್ಯ ಕ್ಷೇತ್ರದಲ್ಲಿ ವೈದ್ಯರ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ಬೃಹತ್ ಹೆಜ್ಜೆ ಇಟ್ಟಿದೆ. 2026-27ನೇ ಶೈಕ್ಷಣಿಕ ಸಾಲಿಗೆ ದೇಶಾದ್ಯಂತ ಬರೋಬ್ಬರಿ 13,186 ಹೊಸ ಎಂ.ಬಿ.ಬಿ.ಎಸ್ ಸೀಟುಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಲ್ಲಿ ವೈದ್ಯಕೀಯ ಹಬ್ ಆಗಿರುವ ಕರ್ನಾಟಕ ರಾಜ್ಯಕ್ಕೆ ಒಂದೇ ಸಮನೆ 1,650 ಹೊಸ ಸೀಟುಗಳು ಮಂಜೂರಾಗಿವೆ! ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಅದರ ಸಂಪೂರ್ಣ ವರದಿ ಇಲ್ಲಿದೆ ನೋಡಿ.
ಈ ನೂತನ ಸೀಟುಗಳ ಸೇರ್ಪಡೆಯೊಂದಿಗೆ ದೇಶಾದ್ಯಂತ ಒಟ್ಟು ಎಂ.ಬಿ.ಬಿ.ಎಸ್ ಸೀಟುಗಳ ಸಂಖ್ಯೆ ಈಗ 1,40,214ಕ್ಕೆ ಏರಿಕೆಯಾಗಿದೆ. ದೇಶದಾದ್ಯಂತ ಇರುವ ಒಟ್ಟು 836 ಮೆಡಿಕಲ್ ಕಾಲೇಜುಗಳಲ್ಲಿ ಈ ಸೀಟುಗಳು ಲಭ್ಯವಿರಲಿವೆ. ಇನ್ನು ಕರ್ನಾಟಕಕ್ಕೆ ಹೊಸದಾಗಿ 1,650 ಸೀಟುಗಳು ಸಿಕ್ಕಿರುವುದರಿಂದ, ರಾಜ್ಯದ ಒಟ್ಟು ಎಂ.ಬಿ.ಬಿ.ಎಸ್ ಸೀಟುಗಳ ಸಂಖ್ಯೆ ಈಗ 15,745 ಕ್ಕೆ ಏರಿಕೆಯಾಗಿದೆ. ಇದು ರಾಜ್ಯದ ವೈದ್ಯಕೀಯ ಆಕಾಂಕ್ಷಿಗಳಿಗೆ ಸಿಕ್ಕಿರುವ ದೊಡ್ಡ ವರದಾನವಾಗಿದೆ ಅಂಥ ಹೇಳಬಹುದು.
ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದರೂ ಸೀಟುಗಳ ಕೊರತೆಯಿಂದ ವಿದೇಶಗಳಿಗೆ ತೆರಳುವ ಅನಿವಾರ್ಯತೆ ಎದುರಾಗುತ್ತಿತ್ತು. ಆದರೆ ಇನ್ಮುಂದೆ ದೇಶದಲ್ಲೇ ಕೈಗೆಟುಕುವ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಯುವಜನತೆಗೆ ಹೆಚ್ಚಿನ ಅವಕಾಶ ಸಿಗಲಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವೈದ್ಯರ ಲಭ್ಯತೆಯನ್ನು ಹೆಚ್ಚಿಸುವ ಮೂಲಕ ಸುಸಜ್ಜಿತ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ವೈದ್ಯಕೀಯ ಶಿಕ್ಷಣ ಕ್ಷೇತ್ರ ಹೊಸ ಎತ್ತರಕ್ಕೆ ಬೆಳೆಯುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳಲು ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.




