ಬೆಂಗಳೂರು: ಕೇಂದ್ರ ಸರ್ಕಾರದ ಗಣಿಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ತಿದ್ದುಪಡಿ ಮಸೂದೆ ಇದೀಗ ಕರ್ನಾಟಕ ಮತ್ತು ಕೇಂದ್ರ ಸರ್ಕಾರದ ನಡುವೆ ಹೊಸ ಚರ್ಚೆಗೆ ಕಾರಣವಾಗಿದೆ. ರಾಜ್ಯದ ಖನಿಜ ಸಂಪನ್ಮೂಲಗಳ ಮೇಲೆ ತೆರಿಗೆ ಹಾಗೂ ಸೆಸ್ ವಿಧಿಸುವ ಅಧಿಕಾರಕ್ಕೆ ನಿರ್ಬಂಧ ಬೀಳಬಹುದು ಎಂಬ ಆತಂಕವನ್ನು ಕರ್ನಾಟಕ ಸರ್ಕಾರ ವ್ಯಕ್ತಪಡಿಸಿದೆ.
Mines and Minerals (Development and Regulation) Amendment Bill, 2026 ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ, ಮಸೂದೆಯ ಕೆಲವು ಅಂಶಗಳನ್ನು ಮರುಪರಿಶೀಲಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದೆ.
ಕರ್ನಾಟಕದಲ್ಲಿ ಕಬ್ಬಿಣದ ಅದಿರು ಸೇರಿದಂತೆ ಹಲವು ಪ್ರಮುಖ ಖನಿಜ ಸಂಪನ್ಮೂಲಗಳಿದ್ದು, ಗಣಿಗಾರಿಕೆ ರಾಜ್ಯದ ಆದಾಯದ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ಹೀಗಾಗಿ ಖನಿಜ ಸಂಪನ್ಮೂಲಗಳ ಮೇಲಿನ ತೆರಿಗೆ ವಿಧಿಸುವ ಅಧಿಕಾರ ರಾಜ್ಯಗಳ ಬಳಿ ಉಳಿಯಬೇಕು ಎಂಬುದು ಕರ್ನಾಟಕದ ಪ್ರಮುಖ ನಿಲುವಾಗಿದೆ.
ರಾಜ್ಯ ಸರ್ಕಾರದ ಪ್ರಕಾರ, ಹೊಸ ನಿಯಮಗಳಿಂದ ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿರುವ ಖನಿಜ ಸಂಪನ್ಮೂಲಗಳ ಮೇಲೆ ಸ್ವತಂತ್ರವಾಗಿ ತೆರಿಗೆ ಅಥವಾ ಸೆಸ್ ವಿಧಿಸುವ ಅವಕಾಶ ಸೀಮಿತವಾಗುವ ಸಾಧ್ಯತೆಯಿದೆ. ಇದರಿಂದ ರಾಜ್ಯದ ಹಣಕಾಸಿನ ಸ್ವಾಯತ್ತತೆ ಮೇಲೆ ಪರಿಣಾಮ ಬೀರುವ ಆತಂಕವನ್ನು ಸರ್ಕಾರ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗಣಿ ಸಚಿವ ಜಿ. ಕಿಶನ್ ರೆಡ್ಡಿ ಅವರಿಗೆ ಪತ್ರ ಬರೆದು ಮಸೂದೆಯಲ್ಲಿರುವ ರಾಜ್ಯಗಳ ತೆರಿಗೆ ಅಧಿಕಾರಕ್ಕೆ ಸಂಬಂಧಿಸಿದ ಅಂಶಗಳನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.
ಇನ್ನೊಂದೆಡೆ, ದೇಶದ ವಿವಿಧ ರಾಜ್ಯಗಳಲ್ಲಿ ಗಣಿಗಾರಿಕೆಗೆ ಸಂಬಂಧಿಸಿದಂತೆ ವಿಭಿನ್ನ ತೆರಿಗೆ ಮತ್ತು ಸೆಸ್ಗಳು ಇರುವುದರಿಂದ ಉದ್ಯಮದ ವೆಚ್ಚ ಹೆಚ್ಚಾಗುತ್ತಿದೆ ಎಂಬುದು ಕೇಂದ್ರ ಸರ್ಕಾರದ ವಾದವಾಗಿದೆ. ತೆರಿಗೆ ವ್ಯವಸ್ಥೆಯಲ್ಲಿ ಏಕರೂಪತೆ ತರಲು ಹಾಗೂ ಗಣಿಗಾರಿಕೆ ಕ್ಷೇತ್ರದಲ್ಲಿ ಹೂಡಿಕೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಬದಲಾವಣೆಗಳನ್ನು ತರಲಾಗಿದೆ ಎಂದು ಕೇಂದ್ರದ ನಿಲುವು.
ಹೀಗಾಗಿ ಗಣಿಗಾರಿಕೆ ತಿದ್ದುಪಡಿ ಮಸೂದೆ ಇದೀಗ ಕೇವಲ ಗಣಿಗಾರಿಕೆ ಕ್ಷೇತ್ರದ ವಿಚಾರವಾಗಿ ಉಳಿಯದೆ, ರಾಜ್ಯಗಳ ತೆರಿಗೆ ಅಧಿಕಾರ, ಹಣಕಾಸಿನ ಸ್ವಾಯತ್ತತೆ ಮತ್ತು ಕೇಂದ್ರ-ರಾಜ್ಯ ಸಂಬಂಧಗಳ ವಿಚಾರವಾಗಿಯೂ ಚರ್ಚೆಗೆ ಗ್ರಾಸವಾಗಿದೆ.
ಮುಂದಿನ ದಿನಗಳಲ್ಲಿ ಈ ವಿಚಾರದ ಬಗ್ಗೆ ಕರ್ನಾಟಕ ಸರ್ಕಾರ ಮತ್ತಷ್ಟು ಸ್ಪಷ್ಟವಾದ ನಿಲುವು ಪ್ರಕಟಿಸುವ ಸಾಧ್ಯತೆ ಇದ್ದು, ಕೇಂದ್ರ ಮತ್ತು ರಾಜ್ಯದ ನಡುವಿನ ಈ ತಿಕ್ಕಾಟ ಯಾವ ಹಂತಕ್ಕೆ ತಲುಪಲಿದೆ ಎಂಬುದು ಕುತೂಹಲ ಮೂಡಿಸಿದೆ.




