ಹನೂರು ಎನ್​ಕೌಂಟರ್​ ಪ್ರಕರಣ – ಭಾರೀ ಪರಿಹಾರ ಘೋಷಿಸಿದ ವಿಜಯ್!

ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯದಲ್ಲಿ ನಡೆದ ಎನ್ಕೌಂಟರ್ ಪ್ರಕರಣ ಈಗ ತಮಿಳುನಾಡು ಹಾಗೂ ಕರ್ನಾಟಕದ ನಡುವೆ ದೊಡ್ಡ ರಾಜಕೀಯ ಜಂಜಾಟಕ್ಕೆ ಕಾರಣವಾಗಿದೆ. ಹನೂರು ಶೂಟೌಟ್‌ನಲ್ಲಿ ಮೃತಪಟ್ಟ ಮೂವರು ತಮಿಳುನಾಡು ಮೂಲದವರು ಎಂದು ಗುರುತಿಸಲಾಗಿದ್ದು, ಈ ಘಟನೆಗೆ ಭಾಷೆ ಹಾಗೂ ರಾಜಕೀಯ ಬಣ್ಣ ಬಳಿಯಲಾಗುತ್ತಿದೆ ಎಂಬ ಚರ್ಚೆಗಳು ಜೋರಾಗಿವೆ. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಮೃತರ ಕುಟುಂಬಕ್ಕೆ ಭಾರಿ ಪರಿಹಾರ ಘೋಷಿಸಿದೆ!

ಕರ್ನಾಟಕದ ಹನೂರಿನಲ್ಲಿ ನಡೆದ ಈ ಘಟನೆ ತಮಿಳುನಾಡು ವಿಧಾನಸಭೆಯಲ್ಲೂ ಭಾರೀ ಸದ್ದು ಮಾಡಿದೆ. ಡಿಎಂಕೆ ಮತ್ತು ಎಐಡಿಎಂಕೆ ಮುಖಂಡರು ಸದನದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದು, ಮೃತರ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ಪರಿಹಾರ ಹಾಗೂ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಅರಣ್ಯಾಧಿಕಾರಿಗಳು ಬಿಡುಗಡೆ ಮಾಡಿರುವ ಫೋಟೋಗಳ ಬಗ್ಗೆಯೂ ವಿಧಾನಸಭೆಯಲ್ಲಿ ಪ್ರಶ್ನೆಗಳನ್ನು ಎತ್ತಲಾಗಿದೆ.

ಈ ಹಿಂದೆ ಹನೂರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದ ತಮಿಳುನಾಡು ಮುಖ್ಯಮಂತ್ರಿ ವಿಜಯ್, ಇದು ತಮಿಳರ ಹತ್ಯಾಕಾಂಡ ಎಂದು ಬಣ್ಣಿಸಿ ಟ್ವೀಟ್ ಮಾಡಿದ್ದರು. ಕರ್ನಾಟಕ ಸರ್ಕಾರವು ನೊಂದ ಕುಟುಂಬಗಳಿಗೆ ನೆರವು ನೀಡಬೇಕು ಎಂದು ಆಗ್ರಹಿಸಿದ್ದ ಅವರು, ಈಗ ತಮಿಳುನಾಡು ಸರ್ಕಾರದ ವತಿಯಿಂದ ಮೃತಪಟ್ಟ ಮೂವರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ತಮಿಳುನಾಡು ಸರ್ಕಾರದ ಈ ಹೆಜ್ಜೆ ಕರ್ನಾಟಕ ಸರ್ಕಾರಕ್ಕೆ ಪರೋಕ್ಷವಾಗಿ ಕೌಂಟರ್ ಕೊಡುತ್ತಿರುವಂತೆ ಕಾಣುತ್ತಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಇನ್ನು ತಮಿಳುನಾಡಿನ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಕೂಡ ಈ ಘಟನೆ ಅತ್ಯಂತ ಕ್ರೂರ ಹಾಗೂ ಆಘಾತಕಾರಿ ಎಂದು ಹೇಳಿದ್ದು, ಗುಂಡು ಹಾರಿಸಿದ ಅರಣ್ಯಾಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ಘಟನೆಯ ಕುರಿತು ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ನಡೆಸಬೇಕೆಂದು ತಮಿಳುನಾಡಿನ ನಾಯಕರು ಪಟ್ಟು ಹಿಡಿದಿದ್ದಾರೆ.

ಗಡಿ ಭಾಗದ ಅರಣ್ಯದಲ್ಲಿ ನಡೆದ ಈ ಎನ್ಕೌಂಟರ್ ಪ್ರಕರಣವು ಈಗ ಎರಡು ರಾಜ್ಯಗಳ ನಡುವಿನ ದೊಡ್ಡ ರಾಜಕೀಯ ವಿವಾದವಾಗಿ ಮಾರ್ಪಟ್ಟಿದೆ. ಈ ಕುರಿತು ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡಿ ತಿಳಿಸಿ..

About The Author