ಹೂಡಿಕೆದಾರರೇ ಗಮನಿಸಿ – ‘ಸೆಬಿ’ಯಿಂದ ಹೊಸ ನಿಯಮ ಜಾರಿ!

ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಇಲ್ಲಿದೆ ಒಂದು ಪ್ರಮುಖ ಸುದ್ದಿ. ಎಸ್ ‘ಮಾರುಕಟ್ಟೆ ನಿಯಂತ್ರಕ SEBI ಜಾರಿಗೆ ತಂದಿರುವ ನೂತನ ಮಾರ್ಗದರ್ಶಿ ಸೂಚಿಗಳ ಅನ್ವಯ, ಮ್ಯೂಚುವಲ್ ಫಂಡ್ ಯೋಜನೆಗಳ ಮರು ವರ್ಗೀಕರಣ ಮತ್ತು ಬೆಂಚ್‌ಮಾರ್ಕ್ ಬದಲಾವಣೆಗಳು ಇಂದಿನಿಂದ ಜಾರಿಗೆ ಬಂದಿವೆ.

ಈ ಕುರಿತು ರಾಜ್ಯದ ಹೂಡಿಕೆದಾರರಿಗೆ ಈಗಾಗಲೇ ವಿವಿಧ ಇನ್ವೆಸ್ಟ್‌ಮೆಂಟ್ ಆಪ್‌ಗಳಿಂದ ನೋಟಿಫಿಕೇಶನ್‌ಗಳು ಬರಲು ಶುರುವಾಗಿವೆ. ಹಾಗಾದರೆ ಈ ಹೊಸ ನಿಯಮಗಳು ನಿಮ್ಮ ಹೂಡಿಕೆ ಹಾಗೂ SIP ಮೇಲೆ ಯಾವ ರೀತಿಯ ಪರಿಣಾಮ ಬೀಳಲಿವೆ ಎಂಬುದನ್ನು ನೋಡೋಣ ಬನ್ನಿ.

ಮೊದಲನೆಯದಾಗಿ, ಹೂಡಿಕೆದಾರರ ಮನಸ್ಸಿನಲ್ಲಿರುವ ದೊಡ್ಡ ಭಯವೆಂದರೆ ನಮ್ಮ SIP ನಿಂತುಹೋಗುತ್ತಾ ಎನ್ನುವುದು. ಆದರೆ ಆತಂಕ ಪಡುವ ಅಗತ್ಯವಿಲ್ಲ! ನೀವು ಈಗಾಗಲೇ ಮಾಡಿರುವ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ ಅಂದರೆ SIP ಹೂಡಿಕೆಗಳು ಯಾವುದೇ ಅಡಚಣೆಯಿಲ್ಲದೆ ಆಟೋಮ್ಯಾಟಿಕ್ ಆಗಿ ಮುಂದುವರಿಯಲಿವೆ. ನಿಮ್ಮ ಯೂನಿಟ್‌ಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ, ಜೊತೆಗೆ NAV ಮತ್ತು ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ರಚನೆಯಲ್ಲೂ ಯಾವುದೇ ಬದಲಾವಣೆ ಇರುವುದಿಲ್ಲ.

ಫಂಡ್ ಹೌಸ್‌ಗಳು ತಮ್ಮ ಯೋಜನೆಯ ಶೀರ್ಷಿಕೆಯನ್ನು ಹೂಡಿಕೆ ತಂತ್ರಕ್ಕೆ ತಕ್ಕಂತೆ ನೇರವಾಗಿ ಬದಲಾಯಿಸುವುದು ಕಡ್ಡಾಯವಾಗಿದೆ. ಇನ್ನು ಈಕ್ವಿಟಿ ವಿಭಾಗಗಳಲ್ಲಿ ಪೋರ್ಟ್‌ಫೋಲಿಯೋ ಓವರ್‌ಲ್ಯಾಪ್‌ಗೆ ಕಟ್ಟುನಿಟ್ಟಿನ ಮಿತಿ ವಿಧಿಸಲಾಗಿದೆ. ಸೆಕ್ಟರಲ್ ಫಂಡ್‌ಗಳು ತಮ್ಮ ಒಟ್ಟು ಆಸ್ತಿಯ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಇತರ ಯೋಜನೆಗಳೊಂದಿಗೆ ಹಂಚಿಕೊಳ್ಳಲು ಅವಕಾಶವಿಲ್ಲ. ಹೂಡಿಕೆದಾರರಿಗೆ ರಿಸ್ಕ್ ಪ್ರೊಫೈಲ್ ಸುಲಭವಾಗಿ ಅರ್ಥವಾಗಲಿ ಎಂಬ ಕಾರಣಕ್ಕಾಗಿ ಡೆಬ್ಟ್ ಫಂಡ್‌ಗಳ ಡ್ಯೂರೇಷನ್ ಹೆಸರುಗಳನ್ನೂ ಬದಲಾಯಿಸಲಾಗಿದೆ.

ಒಂದು ವೇಳೆ ನಿಮ್ಮ ಸ್ಕೀಮ್‌ಗಳು ಬೇರೆ ಫಂಡ್‌ಗಳೊಂದಿಗೆ ವಿಲೀನಗೊಂಡಿದ್ದರೆ, ಸಿಸ್ಟಮ್ಯಾಟಿಕ್ ಟ್ರಾನ್ಸ್‌ಫರ್ ಪ್ಲಾನ್ ಅಂದರೆ STP ಮಾರ್ಗಗಳನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳುವುದು ಒಳ್ಳೆಯದು. ಹೂಡಿಕೆದಾರರು ತಮ್ಮ AMC ಅಧಿಕೃತ ವೆಬ್‌ಸೈಟ್‌ಗಳಿಗೆ ಲಾಗಿನ್ ಆಗಿ ನವೀಕರಿಸಿದ ವಿವರಗಳನ್ನು ಖಚಿತಪಡಿಸಿಕೊಳ್ಳಬಹುದು. ನಿಮ್ಮ KYC ವಿವರಗಳು ಸರಿಯಾಗಿದ್ದರೆ ಹೂಡಿಕೆ ಪ್ರಕ್ರಿಯೆ ಯಾವುದೇ ತೊಂದರೆಯಿಲ್ಲದೆ ಸುಸೂತ್ರವಾಗಿ ನಡೆಯಲಿದೆ. ಯೋಜನೆ ವಿಲೀನಗೊಂಡಿದ್ದರೆ ಎಕ್ಸಿಟ್ ಲೋಡ್ ಇಲ್ಲದೆ ಹಣ ಹಿಂಪಡೆಯಲು ವಿಶೇಷ ಅವಕಾಶವನ್ನೂ ನೀಡಲಾಗಿದೆ.

ನಿಮ್ಮ ತಿಂಗಳ ಆಟೋಮ್ಯಾಟಿಕ್ ಹೂಡಿಕೆಗಳು ಮಾಮೂಲಿಯಂತೆ ನಡೆದರೂ, ದೀರ್ಘಾವಧಿಯ ಹಣಕಾಸು ಗುರಿಗಳನ್ನು ತಲುಪಲು ನಿಮ್ಮ ಆಸ್ತಿ ಹಂಚಿಕೆಯನ್ನು ಒಮ್ಮೆ ಪರಿಶೀಲಿಸುವುದು ಸೂಕ್ತ. ಈ ಆರ್ಥಿಕ ಸುದ್ದಿಯ ಕುರಿತು ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡಿ ತಿಳಿಸಿ.

About The Author