ಬೆಂಗಳೂರಿನಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಅಂದರೆ ಎಸ್‌ಐಆರ್ ಪ್ರಕ್ರಿಯೆ ರಾಜಕೀಯ ವಲಯದಲ್ಲಿ ಭಾರೀ ನಡುಕ ಹುಟ್ಟಿಸಿದೆ. ಹೌದು ‘ಸಿಲಿಕಾನ್ ಸಿಟಿಯ ಒಟ್ಟು 25 ವಿಧಾನಸಭಾ ಕ್ಷೇತ್ರಗಳು ಸದ್ಯ ‘ಡೇಂಜರ್ ಝೋನ್’ನಲ್ಲಿವೆಯಂತೆ! ಈ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಮತದಾರರ ಹೆಸರುಗಳು ಪಟ್ಟಿಯಿಂದ ಡಿಲೀಟ್ ಆಗುವ ಸಾಧ್ಯತೆಯಿದ್ದು, ರಾಜಕೀಯ ನಾಯಕರಿಗೆ ತಲೆನೋವು ಶುರುವಾಗಿದೆ.
ಅಂಕಿ-ಅಂಶಗಳ ಪ್ರಕಾರ, 25 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಶೇ.40ರಿಂದ 49ರಷ್ಟು ಹೆಸರುಗಳು ಡಿಲೀಟ್ ಆಗುವ ಸಂಭವವಿದ್ದರೆ, ಬರೋಬ್ಬರಿ 5 ಪ್ರಮುಖ ಕ್ಷೇತ್ರಗಳಲ್ಲಿ ಶೇ.50ಕ್ಕಿಂತ ಅಧಿಕ ಮತದಾರರ ಹೆಸರುಗಳು ಹೊರಗುಳಿಯುವ ಸಾಧ್ಯತೆಯಿದೆ ಅಂತ ಹೇಳಲಾಗ್ತಿದೆ! ಆ ಐದು ಕ್ಷೇತ್ರಗಳು ಯಾವುವು ಅಂದ್ರೆ; ಬೊಮ್ಮನಹಳ್ಳಿ, ದಾಸರಹಳ್ಳಿ, ಸಿ.ವಿ. ರಾಮನ್ ನಗರ, ಬಿಟಿಎಂ ಲೇಔಟ್ ಮತ್ತು ವಿಜಯನಗರ. ಈ ಕ್ಷೇತ್ರಗಳಲ್ಲಿ ಬರೋಬ್ಬರಿ ಶೇ.51 ರಿಂದ ಶೇ.55ರಷ್ಟು ಮತದಾರರ ಹೆಸರುಗಳು ಡಿಲೀಟ್ ಲಿಸ್ಟ್‌ನಲ್ಲಿವೆ ಎನ್ನಲಾಗಿದೆ.
ಈ ಐದು ಕ್ಷೇತ್ರಗಳಲ್ಲಿ ರಾಮಲಿಂಗಾರೆಡ್ಡಿ, ಸತೀಶ್ ರೆಡ್ಡಿ, ಮುನಿರಾಜು, ಕೆೃಷ್ಣಪ್ಪ ಹಾಗೂ ಎಸ್. ರಘು ಅವರ ಕ್ಷೇತ್ರಗಳು ಸೇರಿವೆ. ಇನ್ನುಳಿದಂತೆ ಗೋವಿಂದರಾಜನಗರ, ಬಸವನಗುಡಿ, ಮತ್ತು ಆರ್. ಅಶೋಕ್ ಪ್ರತಿನಿಧಿಸುವ ಪದ್ಮನಾಭನಗರ ಸೇರಿದಂತೆ 20 ಕ್ಷೇತ್ರಗಳಲ್ಲಿ ಶೇ.40ರಿಂದ 49ರಷ್ಟು ಮತದಾರರ ಹೆಸರುಗಳು ಡಿಲೀಟ್ ಆಗುವ ಲಕ್ಷಣಗಳಿವೆ. ಇದು ಬೂತ್ ಮಟ್ಟದ ರಾಜಕಾರಣದಲ್ಲಿ ದೊಡ್ಡ ತಲ್ಲಣ ಸೃಷ್ಟಿಸಿದೆ.
SIR ಪ್ರಕ್ರಿಯೆ ಸಂಪೂರ್ಣಗೊಂಡ ಬಳಿಕ ಬಿಡುಗಡೆಯಾಗುವ ಕರಡು ಮತದಾರರ ಪಟ್ಟಿಯಲ್ಲಿ ಇದರ ನೈಜ ಚಿತ್ರಣ ಸ್ಪಷ್ಟವಾಗಲಿದೆ. ಒಂದು ವೇಳೆ ಅರ್ಹ ಮತದಾರರ ಹೆಸರುಗಳು ಕೈಬಿಟ್ಟು ಹೋದರೆ, ನಿಯಮಾನುಸಾರ ಆಕ್ಷೇಪಣೆ ಸಲ್ಲಿಸಲು ಹಾಗೂ ಅಗತ್ಯ ದಾಖಲೆಗಳನ್ನು ಒದಗಿಸಲು ಚುನಾವಣಾ ಆಯೋಗ ಅವಕಾಶ ನೀಡಲಿದೆ. ಆದರೂ, ಇಷ್ಟು ದೊಡ್ಡ ಪ್ರಮಾಣದಲ್ಲಿ ಹೆಸರುಗಳು ಮಂಗಮಯವಾಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಚುನಾವಣಾ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿರುವ ಈ ಮತದಾರರ ಪಟ್ಟಿ ಪರಿಷ್ಕರಣೆಯು ಮುಂದಿನ ದಿನಗಳಲ್ಲಿ ಯಾವ ದೊಡ್ಡ ರಾಜಕೀಯ ತಿರುವು ಪಡೆದುಕೊಳ್ಳಲಿದೆ ಎಂಬುದನ್ನ ಕಾದು ನೋಡಬೇಕಿದೆ.




