Hubli News: ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಗೆ ಹೊಸ ಬಲ

Hubli News: ಬಹುನಿರೀಕ್ಷಿತ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಗೆ ಇದೀಗ ಮತ್ತೊಂದು ಮಹತ್ವದ ಮುನ್ನಡೆ ಸಿಕ್ಕಿದೆ. ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯನ್ನು ಸಾರ್ವಜನಿಕ ಉದ್ದೇಶಕ್ಕಾಗಿ ವಿಶೇಷ ರೈಲ್ವೆ ಯೋಜನೆ ಎಂದು ರೈಲ್ವೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಇದರಿಂದ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆ ಮತ್ತೆ ಕಾರ್ಯಗತಗೊಳ್ಳುವ ನಿರೀಕ್ಷೆ ಹೆಚ್ಚಾಗಿದೆ.

ಹುಬ್ಬಳ್ಳಿಯಿಂದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾಳೆಗುಳಿವರೆಗೆ ಸುಮಾರು 163 ಕಿಲೋಮೀಟರ್ ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ವಿದ್ಯುದೀಕರಣ ಸಹಿತ ಬ್ರಾಡ್‌ಗೇಜ್ ದ್ವಿಪಥ ರೈಲು ಮಾರ್ಗ ನಿರ್ಮಾಣವಾಗಲಿದ್ದು, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಒಟ್ಟು 69 ಗ್ರಾಮಗಳು ಯೋಜನೆಯ ವ್ಯಾಪ್ತಿಗೆ ಒಳಪಡಲಿವೆ.

ಯೋಜನೆಯ ವ್ಯಾಪ್ತಿಯಲ್ಲಿ ಧಾರವಾಡ ಜಿಲ್ಲೆಯ 40 ಗ್ರಾಮಗಳು ಸೇರಲಿವೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ 24 ಹಾಗೂ ಅಂಕೋಲಾ ತಾಲೂಕಿನ 16 ಗ್ರಾಮಗಳು ಯೋಜನೆಯ ವ್ಯಾಪ್ತಿಗೆ ಬರಲಿವೆ. ಯಲ್ಲಾಪುರದ ಹೊಸಳ್ಳಿ ಗ್ರಾಮದಿಂದ ಆರಂಭವಾಗುವ ಉದ್ದೇಶಿತ ರೈಲು ಮಾರ್ಗ ಅಂಕೋಲಾ ತಾಲೂಕಿನ ವ್ಯಾಪ್ತಿಯಲ್ಲಿ ಕೊನೆಗೊಳ್ಳಲಿದೆ.

1998ರಲ್ಲೇ ಚಾಲನೆ ದೊರೆತಿದ್ದ ಈ ಯೋಜನೆಗೆ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಯ ವಿಚಾರದಲ್ಲಿ ಹಲವು ವರ್ಷಗಳಿಂದ ವಿರೋಧ ವ್ಯಕ್ತವಾಗಿತ್ತು. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಯೋಜನೆ ರೂಪಿಸುವಂತೆ ವನ್ಯಜೀವಿ ಮಂಡಳಿಯ ಸಲಹೆಯೊಂದಿಗೆ ಡಿಪಿಆರ್ ಸಿದ್ಧಪಡಿಸಲು 2024ರಲ್ಲಿ ಹೈಕೋರ್ಟ್ ಅನುಮತಿ ನೀಡಿತ್ತು.

ಇದಾದ ಬಳಿಕ ನೈರುತ್ಯ ರೈಲ್ವೆ 16,435 ಕೋಟಿ ರೂಪಾಯಿ ವೆಚ್ಚದ ಪರಿಷ್ಕೃತ ಡಿಪಿಆರ್ ಸಿದ್ಧಪಡಿಸಿ, 2026ರ ಫೆಬ್ರವರಿ 17ರಂದು ರೈಲ್ವೆ ಮಂಡಳಿಗೆ ಸಲ್ಲಿಸಿತ್ತು. ಇದೀಗ ರೈಲ್ವೆ ಸಚಿವಾಲಯ ವಿಶೇಷ ರೈಲ್ವೆ ಯೋಜನೆ ಎಂದು ಅಧಿಸೂಚನೆ ಹೊರಡಿಸಿರುವುದು ಯೋಜನೆಗೆ ಮತ್ತಷ್ಟು ಬಲ ನೀಡಿದೆ.

ವರ್ಷಗಳಿಂದ ನಿರೀಕ್ಷೆಯಲ್ಲಿರುವ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಮೂಡಿಸಿದೆ. ಇದೀಗ ಅಧಿಸೂಚನೆ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಮುಂದಿನ ಹಂತದ ಕಾಮಗಾರಿಗಳು ಯಾವ ರೀತಿಯಲ್ಲಿ ಸಾಗಲಿವೆ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ.

About The Author