Hubli News: ಶಾಂತವಾಗಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇದೀಗ ಐತಿಹಾಸಿಕ ಪುಷ್ಕರಣಿ ವಿಚಾರ ವಿವಾದದ ಕೇಂದ್ರವಾಗಿದೆ. ದೇವಸ್ಥಾನದ ಪುಷ್ಕರಣಿ ಜಾಗದಲ್ಲಿ ಮಹಾನಗರ ಪಾಲಿಕೆ ರಸ್ತೆ ನಿರ್ಮಿಸಿದೆ ಎಂಬ ಆರೋಪ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ಇಲ್ಲಿ ಯಾವುದೇ ಪುಷ್ಕರಣಿ ಇರಲಿಲ್ಲ, ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ನಿರ್ಮಿಸಲಾಗಿದೆ ಎಂದು ಸ್ಥಳೀಯ ಮುಸ್ಲಿಂ ಸಂಘಟನೆಗಳು ಹೇಳುತ್ತಿವೆ. ಎರಡೂ ಬಣಗಳ ವಾದ-ಪ್ರತಿವಾದದಿಂದ ಇದೀಗ ಈ ವಿಚಾರ ಸೂಕ್ಷ್ಮ ಸ್ವರೂಪ ಪಡೆದುಕೊಂಡಿದೆ.
ಒಂದು ಕಡೆ ಪುರಾತನ ಭವಾನಿಶಂಕರ ಹಾಗೂ ನಾರಾಯಣ ದೇವಸ್ಥಾನ… ಮತ್ತೊಂದು ಕಡೆ ಮಸೀದಿ… ಮಧ್ಯದಲ್ಲಿ ವಿವಾದಕ್ಕೆ ಕಾರಣವಾಗಿರುವ ಜಾಗ… ಸುತ್ತಲೂ ಪೊಲೀಸ್ ಸರ್ಪಗಾವಲು… ಹಳೇ ಹುಬ್ಬಳ್ಳಿಯ ಆಸರ್ ಕಾಲೋನಿಯ ಈ ಪ್ರದೇಶ ಇದೀಗ ಪುಷ್ಕರಣಿ ವಿವಾದದಿಂದ ಸುದ್ದಿಯಾಗಿದೆ.
ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದ ದೇವಸ್ಥಾನ ಇದಾಗಿದ್ದು, ಇಲ್ಲಿನ ಪುಷ್ಕರಣಿಯ ನೀರಿನಿಂದಲೇ ದೇವರ ಪೂಜೆ ನಡೆಯುತ್ತಿತ್ತು ಎಂಬ ನಂಬಿಕೆ ಇದೆ ಎಂದು ದೇವಸ್ಥಾನ ರಕ್ಷಣಾ ಸಮಿತಿ ಹೇಳುತ್ತಿದೆ. ಪುಷ್ಕರಣಿ ಜಾಗ ಒತ್ತುವರಿಯಾಗಿ ಮನೆಗಳು ನಿರ್ಮಾಣವಾಗಿದ್ದು, ಇದೀಗ ಅದೇ ಜಾಗದಲ್ಲಿ ಪಾಲಿಕೆ ರಸ್ತೆ ನಿರ್ಮಿಸುತ್ತಿದೆ ಎಂಬುದು ಹಿಂದೂಪರ ಸಂಘಟನೆಗಳ ಆರೋಪ.
ಪುಷ್ಕರಣಿ ಜಾಗದ ಒತ್ತುವರಿ ತೆರವುಗೊಳಿಸಿ, ಐತಿಹಾಸಿಕ ಪ್ರದೇಶವನ್ನು ಸಂರಕ್ಷಿಸಬೇಕು ಎಂದು ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ ಎಂದು ಸಂಘಟನೆಗಳು ಹೇಳಿವೆ. ಆಗಸ್ಟ್ 5ರಂದು ರಸ್ತೆ ನಿರ್ಮಾಣ ಮಾಡದಂತೆ ಪಾಲಿಕೆ ಹಾಗೂ ಪುರಾತತ್ವ ಇಲಾಖೆಗೆ ಮನವಿ ಸಲ್ಲಿಸಿದ್ದರೂ, ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅಧಿಕಾರಿಗಳೊಂದಿಗೆ ನಡೆದ ಮಾತುಕತೆಯಂತೆ ರಸ್ತೆ ತೆರವುಗೊಳಿಸಲು ಕಾಲಾವಕಾಶ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೇವಸ್ಥಾನ ರಕ್ಷಣಾ ಸಮಿತಿ ಆರೋಪಿಸಿದೆ. ಆಗಸ್ಟ್ 22ರೊಳಗೆ ಒತ್ತುವರಿ ತೆರವುಗೊಳಿಸದಿದ್ದರೆ ತಾವೇ ರಸ್ತೆ ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದರ ಬೆನ್ನಲ್ಲೇ ಮತ್ತೊಂದು ಬಣದಿಂದ ವಿರೋಧ ವ್ಯಕ್ತವಾಗಿದೆ. ಇಲ್ಲಿ ಪುಷ್ಕರಣಿ ಇರಲಿಲ್ಲ, ಕೆರೆಯ ಜಾಗವಾಗಿತ್ತು. ಮಳೆಗಾಲದಲ್ಲಿ ಕೆಸರು ತುಂಬಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ, 25 ಲಕ್ಷ ರೂಪಾಯಿ ವೆಚ್ಚದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ ಎಂಬುದು ಸ್ಥಳೀಯ ಪಾಲಿಕೆ ಸದಸ್ಯ ಇಕ್ಬಾಲ್ ನವಲೂರು ಹಾಗೂ ಮುಸ್ಲಿಂ ಸಂಘಟನೆಗಳ ವಾದ.
ದೇವಸ್ಥಾನ, ಜೈನ ಮಂದಿರ ಹಾಗೂ ಮಸೀದಿ ಸಮೀಪದಲ್ಲಿದ್ದರೂ ಇಷ್ಟು ವರ್ಷಗಳಿಂದ ಯಾವುದೇ ಸಮಸ್ಯೆ ಇರಲಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಜೀವನ ನಡೆಸುತ್ತಿದ್ದೇವೆ. ಇದೀಗ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಒಂದೆಡೆ ಐತಿಹಾಸಿಕ ಪುಷ್ಕರಣಿ ಜಾಗದ ಒತ್ತುವರಿ ತೆರವುಗೊಳಿಸಬೇಕು ಎಂಬ ಆಗ್ರಹ… ಮತ್ತೊಂದೆಡೆ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ನಿರ್ಮಿಸಲಾಗಿದೆ ಎಂಬ ಸಮರ್ಥನೆ… ಎರಡೂ ಬಣಗಳ ವಾದ-ಪ್ರತಿವಾದದ ನಡುವೆ ವಿವಾದ ಇದೀಗ ಸೂಕ್ಷ್ಮ ಹಂತ ತಲುಪಿದೆ.
ಹಳೇ ಹುಬ್ಬಳ್ಳಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಪುಷ್ಕರಣಿ ನಿಜವಾಗಿಯೂ ಐತಿಹಾಸಿಕ ತಾಣವೇ? ಜಾಗ ಒತ್ತುವರಿಯಾಗಿದೆಯೇ? ರಸ್ತೆ ನಿರ್ಮಾಣಕ್ಕೆ ಕಾನೂನುಬದ್ಧ ಅನುಮತಿ ಇದೆಯೇ? ಎಂಬ ಪ್ರಶ್ನೆಗಳಿಗೆ ಕಂದಾಯ ದಾಖಲೆ, ಪುರಾತತ್ವ ಇಲಾಖೆ ಪರಿಶೀಲನೆ ಹಾಗೂ ವೈಜ್ಞಾನಿಕ ಸರ್ವೇ ಮೂಲಕ ಸ್ಪಷ್ಟ ಉತ್ತರ ಸಿಗಬೇಕಿದೆ.
ಐತಿಹಾಸಿಕ ತಾಣದ ಸಂರಕ್ಷಣೆ ಹಾಗೂ ಸಾರ್ವಜನಿಕರ ಮೂಲಸೌಕರ್ಯ—ಎರಡೂ ಮುಖ್ಯ. ಆದರೆ ಸೂಕ್ಷ್ಮ ವಿಚಾರವೊಂದು ಕೋಮು ಸಂಘರ್ಷಕ್ಕೆ ಕಾರಣವಾಗದಂತೆ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ, ದಾಖಲೆ ಹಾಗೂ ಕಾನೂನಿನ ಆಧಾರದ ಮೇಲೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ.
“ಒಂದೆಡೆ ಪುಷ್ಕರಣಿ ಸಂರಕ್ಷಣೆಯ ಹಕ್ಕೊತ್ತಾಯ, ಮತ್ತೊಂದೆಡೆ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ನಿರ್ಮಾಣದ ಸಮರ್ಥನೆ… ಸದ್ಯ ಎರಡೂ ಬಣಗಳ ವಾದದ ನಡುವೆ ಈ ಜಾಗ ವಿವಾದದ ಕೇಂದ್ರವಾಗಿದೆ. ಇದೀಗ ದಾಖಲೆಗಳು, ಸರ್ವೇ ಹಾಗೂ ಪುರಾತತ್ವ ಇಲಾಖೆಯ ಪರಿಶೀಲನೆಯಿಂದಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ. ಈ ವಿವಾದ ಯಾವುದೇ ಕಾರಣಕ್ಕೂ ಕೋಮು ಸಂಘರ್ಷಕ್ಕೆ ತಿರುಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಿದೆ.”
ಕ್ಯಾಮೆರಾ ಪರ್ಸನ್ ಹೇಮಂತ್ ಜೊತೆ, ಸಂಗಮೇಶ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ.




