ಕನ್ನಡ ಚಿತ್ರರಂಗದ ಹಿರಿಯ ನಟಿ ಹಾಗೂ ಕಾಂಗ್ರೆಸ್ ನಾಯಕಿ ಉಮಾಶ್ರೀ ಅವರು ವಿಧಾನಪರಿಷತ್ ಉಪಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ವಿಧಾನಪರಿಷತ್ತಿನಲ್ಲಿ ಮಾತನಾಡಿದ ಅವರು, ತಮ್ಮ ವೈಯಕ್ತಿಕ ಜೀವನ, ಸಿನಿಮಾ ಪಯಣ ಹಾಗೂ ರಾಜಕೀಯ ಪ್ರವೇಶದ ಹಿಂದಿನ ಕಾರಣಗಳನ್ನು ಭಾವುಕವಾಗಿ ಹಂಚಿಕೊಂಡಿದ್ದಾರೆ.
ಉಪಸಭಾಪತಿ ಸ್ಥಾನಕ್ಕೆ ಆಡಳಿತ ಪಕ್ಷದ ಬಹುಮತವಿದ್ದ ಹಿನ್ನೆಲೆಯಲ್ಲಿ ಹಾಗೂ ಪ್ರತಿಪಕ್ಷದಿಂದ ಯಾರೂ ನಾಮಪತ್ರ ಸಲ್ಲಿಸದ ಕಾರಣ ಉಮಾಶ್ರೀ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಹಿಂದೆ ಉಪಸಭಾಪತಿಯಾಗಿದ್ದ ಎಂ.ಕೆ. ಪ್ರಾಣೇಶ್ ರಾಜೀನಾಮೆ ನೀಡಿದ್ದರಿಂದ ಸ್ಥಾನ ತೆರವಾಗಿತ್ತು.
ತಮ್ಮ ರಾಜಕೀಯ ಬದುಕಿನ ಕುರಿತು ಮಾತನಾಡಿದ ಉಮಾಶ್ರೀ, ಸಮಾಜ ಸೇವೆ ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದಾಗಿ ಹೇಳಿದರು. ಬಂಗಾರಪ್ಪ, ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ತಮ್ಮನ್ನು ರಾಜಕೀಯವಾಗಿ ಬೆಳೆಸಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.
ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಅವರು, ಕೂಲಿ ಕೆಲಸ ಮಾಡುತ್ತಿದ್ದ ತಾಯಿ ನಿಂಗಮ್ಮ ಅವರೇ ತಮ್ಮ ಬದುಕಿನ ದೊಡ್ಡ ಶಕ್ತಿ ಎಂದು ಹೇಳಿದರು. “ನನ್ನ ಸಾಧನೆಯ ಹಿಂದೆ ನನ್ನ ತಾಯಿಯ ತ್ಯಾಗವಿದೆ. ಸಾಕಿ ಸಲಹಿದ ಬಳಿಕ ದತ್ತು ಪುತ್ರಿಯಾಗಿ ಸ್ವೀಕರಿಸಿದ ಸ್ವಾತಂತ್ರ್ಯ ಹೋರಾಟಗಾರ ಮುನಿನರಸಪ್ಪ ಹಾಗೂ ರೇವಮ್ಮ ದಂಪತಿಗೂ ನಾನು ಋಣಿ” ಎಂದು ಭಾವುಕರಾದರು.
ಒಂದೇ ರಾತ್ರಿಯಲ್ಲಿ ತಾರೆಯಾದ ಉಮಾಶ್ರೀ
ತಮ್ಮ ಸಿನಿಮಾ ಪಯಣವನ್ನು ನೆನಪಿಸಿಕೊಂಡ ಉಮಾಶ್ರೀ, ‘ಅನುಭವ’ ತಮ್ಮ ಮೊದಲ ಸಿನಿಮಾ ಎಂದು ಹೇಳಿದರು. ನಿರ್ದೇಶಕ ಕಾಶಿನಾಥ್ ಅವರು ಅವಕಾಶ ನೀಡಿದ್ದರು. ಬಳಿಕ ‘ಪುಟ್ನಂಜ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದರು.
ಚಿತ್ರರಂಗದಲ್ಲಿ ಸಾಕಷ್ಟು ಅವಕಾಶಗಳು ಬರುತ್ತಿದ್ದರೂ, ಸಮಾಜ ಸೇವೆ ಮಾಡುವ ತುಡಿತದಿಂದ ರಾಜಕೀಯದತ್ತ ಮುಖ ಮಾಡಿದ್ದಾಗಿ ಹೇಳಿದರು. ಉತ್ತರ ಕರ್ನಾಟಕದ ಮಣ್ಣಿನಲ್ಲಿ ತಮ್ಮ ರಾಜಕೀಯ ಜೀವನ ಆರಂಭವಾಯಿತು. ಜಗದೀಶ್ ಶೆಟ್ಟರ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ತಮ್ಮ ರಾಜಕೀಯ ಬದುಕಿಗೆ ಮಹತ್ವದ ತಿರುವು ನೀಡಿತು ಎಂದು ನೆನಪಿಸಿಕೊಂಡರು.
“ಮತ್ತೆ ಮದುವೆ ಆಗಲಾ?” ಎಂದು ಮಗಳನ್ನು ಕೇಳಿದ್ದೆ
ತಮ್ಮ ಎರಡನೇ ಮದುವೆಯ ವಿಚಾರವನ್ನೂ ಉಮಾಶ್ರೀ ಬಹಿರಂಗಪಡಿಸಿದರು. ಗಂಡನಿಂದ ದೂರವಾದ ಬಳಿಕ ಒಂಟಿ ಜೀವನ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ನೇಹಿತರು ಮತ್ತೊಂದು ಮದುವೆಯಾಗುವಂತೆ ಸಲಹೆ ನೀಡಿದ್ದರು. “ಎಷ್ಟು ದಿನ ಒಂಟಿಯಾಗಿ ಇರುತ್ತೀಯಾ? ನಿನಗೆ ಸಂಗಾತಿ ಬೇಕು” ಎಂದು ಸ್ನೇಹಿತರು ಹೇಳುತ್ತಿದ್ದರಂತೆ.
ಅದೇ ಸಮಯದಲ್ಲಿ ಟಿ.ಎನ್. ಸೀತಾರಾಮ್ ಅವರು ರಮೇಶ್ ಬಂದಗದ್ದೆ ಅವರೊಂದಿಗೆ ಮದುವೆ ಮಾಡಿಸುವ ಕುರಿತು ಯೋಚಿಸಿದ್ದರು. ಈ ವಿಚಾರವಾಗಿ ಮಗಳ ಬಳಿ “ನಾನು ಮದುವೆ ಆಗಲಾ?” ಎಂದು ಕೇಳಿದ್ದಾಗಿ ಉಮಾಶ್ರೀ ಹೇಳಿದರು.
ಆಗ ಮಗಳು, “ನನ್ನ ತಾಯಿಯನ್ನು ಬೇರೆಯವರ ಜೊತೆ ಹಂಚಿಕೊಳ್ಳೋಕೆ ನನಗೆ ಇಷ್ಟ ಇಲ್ಲ” ಎಂದು ಹೇಳಿದ್ದಳಂತೆ. ಮಗಳ ಆ ಮಾತಿನ ಬಳಿಕ ತಾನು ಎರಡನೇ ಮದುವೆಯಾಗುವ ನಿರ್ಧಾರ ಕೈಬಿಟ್ಟಿದ್ದಾಗಿ ಉಮಾಶ್ರೀ ಭಾವುಕರಾಗಿ ಹೇಳಿದರು.
ಮಗಳ ಜೊತೆ ನಾಟಕದ ದಿನಗಳ ಹೋರಾಟ
ತಮ್ಮ ಜೀವನದ ಕಷ್ಟದ ದಿನಗಳನ್ನೂ ಉಮಾಶ್ರೀ ನೆನಪಿಸಿಕೊಂಡರು. ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಸಂದರ್ಭದಲ್ಲಿ ಹಾಲಿನ ಬಾಟಲಿಯೊಂದಿಗೆ ಮಗುವನ್ನು ಎತ್ತಿಕೊಂಡೇ ನಾಟಕಗಳಿಗೆ ಹೋಗುತ್ತಿದ್ದೆ ಎಂದು ಹೇಳಿದರು.
“ನಟಿಯರು ಹುಟ್ಟೋದೇ ನಮ್ಮ ಸುತ್ತಮುತ್ತಲಿನ ಜಗತ್ತಿಗಾಗಿ. ನಾವು ನಮಗಾಗಿ ಬದುಕದೇ ಇದ್ದರೂ, ನಾವು ಕಟ್ಟಿಕೊಂಡ ಬದುಕಿಗಾಗಿ ಬದುಕಬೇಕಾಗುತ್ತದೆ” ಎಂದು ತಮ್ಮ ಹೋರಾಟದ ದಿನಗಳನ್ನು ವಿವರಿಸಿದರು.
ತಮ್ಮ ಪತಿ ನಂತರ ಮತ್ತೊಂದು ಮದುವೆಯಾಗಿದ್ದು, ಮಕ್ಕಳಾದರೂ ಅವರ ಮಕ್ಕಳ ಶಿಕ್ಷಣಕ್ಕೂ ತಾನು ಸಹಾಯ ಮಾಡಿದ್ದಾಗಿ ಹೇಳಿದರು. ಕಾನೂನುಬದ್ಧವಾಗಿ ವಿಚ್ಛೇದನ ಪಡೆಯದಿದ್ದರೆ ಮುಂದೆ ಸಮಸ್ಯೆಯಾಗಬಹುದು ಎಂದು ಲೋಕೇಶ್ ಅವರು ಸಲಹೆ ನೀಡಿದ್ದರಿಂದ ನಂತರ ಡಿವೋರ್ಸ್ ಪಡೆದಿದ್ದಾಗಿ ತಿಳಿಸಿದರು.
“ಪುರುಷರ ಕಡೆ ಗಮನ ಹೋಗಬಾರದು ಅಂತ ರಾಜಕೀಯಕ್ಕೆ ಬಂದೆ”
ಒಂಟಿ ಜೀವನವನ್ನು ಎದುರಿಸುವುದನ್ನು ಕಲಿತಿದ್ದೆ ಎಂದು ಹೇಳಿದ ಉಮಾಶ್ರೀ, ತಮ್ಮ ಬದುಕಿನ ಮತ್ತೊಂದು ಕುತೂಹಲಕಾರಿ ಸಂಗತಿಯನ್ನೂ ಹಂಚಿಕೊಂಡರು.
“ನನ್ನ ಗಮನ ಬೇರೆ ಕಡೆಗೆ ಹೋಗಬಾರದು, ಪುರುಷರ ಕಡೆಗೆ ಗಮನ ಹೋಗಬಾರದು ಎಂದು 38ನೇ ವಯಸ್ಸಿನಲ್ಲಿ ರಾಜಕೀಯಕ್ಕೆ ಬಂದೆ. ರಾಜಕೀಯದ ಕಡೆಗೆ ಸಂಪೂರ್ಣ ಗಮನ ಕೊಟ್ಟು ಎಂಎಲ್ಎ ಆದೆ, ಎಂಎಲ್ಸಿ ಆದೆ. ಈಗ ವಿಧಾನಪರಿಷತ್ ಉಪಸಭಾಪತಿಯಾಗಿದ್ದೇನೆ” ಎಂದು ಉಮಾಶ್ರೀ ಹೇಳಿದರು.
ಸಿನಿಮಾ, ನಾಟಕ, ವೈಯಕ್ತಿಕ ಬದುಕಿನ ಏಳುಬೀಳುಗಳನ್ನು ದಾಟಿ ರಾಜಕೀಯದಲ್ಲಿ ಸ್ಥಾನ ಪಡೆದಿರುವ ಉಮಾಶ್ರೀ, ಇದೀಗ ವಿಧಾನಪರಿಷತ್ ಉಪಸಭಾಪತಿಯಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
