ಪದ್ಮನಾಭನಗರದಲ್ಲಿ ಪಕ್ಷಾಂತರಕ್ಕೆ ಕಾಂಗ್ರೆಸ್ ತಿರುಗೇಟು – 2028ರ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸ

ಬೆಂಗಳೂರು: ಪದ್ಮನಾಭನಗರ ಕ್ಷೇತ್ರದಲ್ಲಿ ಕೆಲವರು ಕಾಂಗ್ರೆಸ್ ಪಕ್ಷವನ್ನು ತೊರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ಶಿವರಾಮೇಗೌಡ ಪ್ರತಿಕ್ರಿಯಿಸಿದ್ದಾರೆ. ಪಕ್ಷ ತೊರೆದವರಿಂದ ಕಾಂಗ್ರೆಸ್ ಕಾರ್ಯಕರ್ತರು ಅಧೀರರಾಗುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶಿವರಾಮೇಗೌಡ, ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲವರು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪಕ್ಷಕ್ಕೆ ಸೇರ್ಪಡೆಯಾಗಿ ಹಲವು ಅನುಕೂಲಗಳನ್ನು ಪಡೆದುಕೊಂಡು ಇದೀಗ ಮತ್ತೆ ಪಕ್ಷಾಂತರ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಬೆಳವಣಿಗೆ ಮಾಜಿ ಸಚಿವ ಆರ್. ಅಶೋಕ್ ಅವರ ಪ್ರಚೋದನೆಯಿಂದ ನಡೆದಿದೆ ಎಂದು ಅವರು ಆರೋಪಿಸಿದರು.

ಯಾರಾದರೂ ಪಕ್ಷ ತೊರೆದ ತಕ್ಷಣ ಕಾಂಗ್ರೆಸ್ ಕಾರ್ಯಕರ್ತರು ಧೈರ್ಯ ಕಳೆದುಕೊಳ್ಳಬಾರದು. ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ. ಪಕ್ಷಕ್ಕೆ ಬರುವವರು, ಹೋಗುವವರು ಇದ್ದೇ ಇರುತ್ತಾರೆ. ಇದರಿಂದ ಪಕ್ಷಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಶಿವರಾಮೇಗೌಡ ಹೇಳಿದರು.

ಪದ್ಮನಾಭನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರಾದ ಗುರಪ್ಪ ನಾಯ್ಡು, ಕಬ್ಬಡಿ ಬಾಬು ಸೇರಿದಂತೆ ಹಲವು ನಾಯಕರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ವೆಂಕಟೇಶಮೂರ್ತಿ ಕೂಡ ಕ್ಷೇತ್ರದಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಯಾರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ, ಯಾರು ಹೋಗುತ್ತಾರೆ ಎಂಬುದು ಮುಖ್ಯವಲ್ಲ. ಕಾಂಗ್ರೆಸ್ ಸಾವಿರಾರು ಕಾರ್ಯಕರ್ತರನ್ನು ಬೆಳೆಸಿರುವ ಪಕ್ಷವಾಗಿದ್ದು, ಪದ್ಮನಾಭನಗರದ ಕಾರ್ಯಕರ್ತರಿಗೆ ಮತ್ತಷ್ಟು ಶಕ್ತಿ ತುಂಬುವ ಉದ್ದೇಶದಿಂದ ಕೆಲಸ ಮಾಡಲಾಗುತ್ತಿದೆ ಎಂದು ಶಿವರಾಮೇಗೌಡ ಹೇಳಿದರು.

2028ರ ವಿಧಾನಸಭಾ ಚುನಾವಣೆಯಲ್ಲಿ ಪದ್ಮನಾಭನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಈಗಿನಿಂದಲೇ ಸಂಘಟನಾತ್ಮಕವಾಗಿ ಶ್ರಮಿಸಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಇನ್ನು ಪದ್ಮನಾಭನಗರ ಭಾಗದ ಕೆಲ ಪಾಲಿಕೆ ಸದಸ್ಯರನ್ನು ಕಾಂಗ್ರೆಸ್ ಪಕ್ಷಕ್ಕೆ ಯಾರೂ ಆಹ್ವಾನಿಸಿರಲಿಲ್ಲ. ಅವರಾಗಿಯೇ ಕಾಂಗ್ರೆಸ್‌ಗೆ ಬಂದು ಅಧಿಕಾರದ ಅನುಭವ ಪಡೆದುಕೊಂಡು ಇದೀಗ ಅವರಾಗಿಯೇ ಪಕ್ಷ ತೊರೆದಿದ್ದಾರೆ ಎಂದು ಶಿವರಾಮೇಗೌಡ ಹೇಳಿದರು. ಈ ಬೆಳವಣಿಗೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಎದೆಗುಂದುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

About The Author