Political News: ಹುಬ್ಬಳ್ಳಿಯಲ್ಲಿ ಪುಷ್ಕರಣಿ ಕೇಸ್ ಮತ್ತು ದೇವಸ್ಥಾನದಲ್ಲಿ ಜಾಫರ್ ಎಂಬಾತ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಿಜಯೇಂದ್ರ ಶಾಂತವಾಗಿದ್ದ ಹುಬ್ಬಳ್ಳಿಯನ್ನು ಮತ್ತೆ ಕದಡುವ ಲಕ್ಷಣಗಳು ಕಂಡು ಬರುತ್ತಿವೆ ಎಂದಿದ್ದಾರೆ.
ಒಂದು ಸಮುದಾಯವನ್ನು ಓಲೈಸಲು, ಕೇವಲ ಮತಬ್ಯಾಂಕ್ ಗಾಗಿ ಹಿಂದೂಗಳ ಪವಿತ್ರ ಕ್ಷೇತ್ರಗಳನ್ನೆ ಈ ಸರ್ಕಾರ ಗುರಿಯಾಗಿಸಿಕೊಳ್ಳುತ್ತಿದೆ. ಶತಮಾನಗಳಷ್ಟು ಹಳೆಯದಾದ ಹಳೆ ಹುಬ್ಬಳ್ಳಿಯಲ್ಲಿರುವ ಭವಾನಿಶಂಕರ ದೇವಾಲಯದ ಪುಷ್ಕರಣೆಯ ಮೇಲೆ ಈಗ ಕಾಂಗ್ರೆಸ್ ಸರ್ಕಾರ ಹಾಗೂ ಸ್ಥಳೀಯ ಆಡಳಿತ ಕಣ್ಣು ಬೀರಿದೆ. ಪುಷ್ಕರಣೆಯ ಜಾಗದಲ್ಲಿ ಮಹಾನಗರ ಪಾಲಿಕೆ ರಸ್ತೆ ನಿರ್ಮಿಸುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಮಾಡಿದೆ ಎಂದು ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಇದೆ ಸಾಹಸವನ್ನು, ದರ್ಪ ಹಾಗೂ ದೌಲತ್ತನ್ನು ರಸ್ತೆ ನಡುವೆಯೇ ಮಸೀದಿ ಕಟ್ಟುವ, ರಸ್ತೆ ನಡುವೆ ನಮಾಜ್ ಮಾಡುವವರ ಮೇಲೆ ತೋರಿಸುವ ತಾಕತ್ತು ಈ ಸರ್ಕಾರಕ್ಕೆ ಇದೆಯೇ? ಈ ಸರ್ಕಾರ ಕೇವಲ ಅಮಾಯಕ ಹಿಂದೂಗಳು ಹಾಗೂ ಹಿಂದೂಗಳ ಪವಿತ್ರ ಕ್ಷೇತ್ರಗಳನ್ನೇ ಗುರಿಯಾಗಿಸಿಕೊಂಡಿದೆ.
ಮಾನ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮುಜರಾಯಿ ಸಚಿವರೇ, ನಿಮಗೆ ರಾಜ್ಯದ ಜನ ನೆಮ್ಮದಿಯಿಂದ ಇರುವುದು ಬೇಡ? ಸದಾ ಯಾವುದಾದರೂ ಗಲಾಟೆ, ಗಲಭೆ ನಡೆಸುತ್ತಲೇ ಇರಬೇಕು. ನಿಮ್ಮ ವೋಟ್ ಬ್ಯಾಂಕ್ ಗಟ್ಟಿಮಾಡಿಕೊಳ್ಳಲು ಅಮಾಯಕ ಹಿಂದುಗಳೇ ಬೇಕಾ? ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಚಾಲುಕ್ಯರ ಕಾಲದಿಂದಲೇ ಈ ಪುಷ್ಕರಣೆ ನೀರನ್ನೇ ಬಳಸಿ ಪೂಜೆ ನಡೆಯುತ್ತಿತ್ತು ಎನ್ನುವ ನಂಬಿಕೆಯಿದೆ. ನೀವು ಹಿಂದೂಗಳ ನಂಬಿಕೆ ಏಟು ನೀಡುವ ಕೆಲಸ ಮಾಡುತ್ತಿದ್ದೀರಿ. ಇದಕ್ಕೆ ತಕ್ಕ ಪ್ರತಿಫಲ ಶೀಘ್ರದಲ್ಲಿಯೇ ಅನುಭವಿಸುತ್ತಿರಿ. ಹಿಂದೂಗಳ ಮೇಲೆ ಸದಾ ಬೆಂಕಿ ಕಾರುವ ಗೃಹ ಸಚಿವರೇ, ನಿಮ್ಮ ಪಕ್ಕದ ಜಿಲ್ಲೆಯಲ್ಲಿ ಕೇವಲ 48 ಗಂಟೆಗಳಲ್ಲಿ ಇಬ್ಬರು ಅಮಾಯಕ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಆಗಿದೆ.
ರಾಜ್ಯದಲ್ಲಿ ಅಕ್ರಮವಾಗಿ ಬಾಂಗ್ಲಾದೇಶಿಯರು ನೆಲೆಯೂರಿದ್ದಾರೆ, ಕೆಲವರ ಬಳಿ ಅಕ್ರಮವಾಗಿ ವೋಟರ್ ಐಡಿಗಳು ಸಿಕ್ಕಿವೆ. ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂಗಳ ದೇವಸ್ಥಾದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾನೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಮೊದಲು. ಇವರಿಗೆಲ್ಲ ಸರ್ಕಾರದ ಭಯವಿಲ್ಲ, ಇಂತಹ ಸಮಾಜಘಾತುಕರ ಮೇಲೆ ನಿಮ್ಮ ಕೈ ಇದೆ ಎನ್ನುವುದೇ ಧೈರ್ಯ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ವ್ಯಂಗ್ಯವಾಡಿ್ದ್ದಾರೆ.

