Dharwad News: ಧಾರವಾಡದಲ್ಲಿ 14 H1N1 ಪಾಸಿಟಿವ್ ಪ್ರಕರಣಗಳು ಪತ್ತೆ

Dharwad News: ರಾಜ್ಯದಲ್ಲಿ H1N1 ಹಾಗೂ ವೈರಲ್ ಫೀವರ್ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹುಬ್ಬಳ್ಳಿ-ಧಾರವಾಡದಲ್ಲೂ ಜ್ವರ, ನೆಗಡಿ, ಕೆಮ್ಮಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕಿಮ್ಸ್‌ನಲ್ಲೂ ಹೊರರೋಗಿಗಳ ಸಂಖ್ಯೆ ಏರಿಕೆಯಾಗಿದ್ದು, ಇದುವರೆಗೆ 14 H1N1 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇದೀಗ ವೈರಲ್ ಫೀವರ್ ಆತಂಕ ಹೆಚ್ಚಾಗಿದೆ. ಜ್ವರ, ನೆಗಡಿ, ಕೆಮ್ಮು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಮಕ್ಕಳು, ವಯೋವೃದ್ಧರು ಸೇರಿದಂತೆ ವಿವಿಧ ವಯೋಮಾನದವರಲ್ಲಿ ಜ್ವರದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕಿಮ್ಸ್ ಸೇರಿದಂತೆ ನಗರದ ಪ್ರಮುಖ ಆಸ್ಪತ್ರೆಗಳಲ್ಲಿ OPDಗೆ ಬರುತ್ತಿರುವ ರೋಗಿಗಳ ಸಂಖ್ಯೆ ಏರಿಕೆಯಾಗಿದೆ.

ಇದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ OPD. ಸಾಮಾನ್ಯ ದಿನಗಳಿಗಿಂತ ಇದೀಗ ಜ್ವರ, ನೆಗಡಿ, ಕೆಮ್ಮಿನ ಸಮಸ್ಯೆಯಿಂದ ಆಸ್ಪತ್ರೆಗೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ H1N1 ಸೋಂಕು ದೃಢಪಟ್ಟಿರುವ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಆದರೆ ವೈದ್ಯರು ಹೇಳುವ ಪ್ರಕಾರ, ಆತಂಕಪಡುವುದಕ್ಕಿಂತ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ.

ಕಿಮ್ಸ್‌ನಲ್ಲಿ ಇದುವರೆಗೆ 14 H1N1 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜುಲೈ ತಿಂಗಳಲ್ಲಿ 29 ಸ್ಯಾಂಪಲ್‌ಗಳನ್ನು ಪರೀಕ್ಷಿಸಿದಾಗ ಐದು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಆಗಸ್ಟ್‌ನಲ್ಲಿ ಇದುವರೆಗೆ 39 ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿದ್ದು, ಒಂಬತ್ತು ಮಂದಿಯಲ್ಲಿ H1N1 ಪಾಸಿಟಿವ್ ಬಂದಿದೆ. ಜ್ವರದ ಜೊತೆಗೆ ನೆಗಡಿ, ಕೆಮ್ಮು ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.

ಒಬ್ಬರಿಗೆ ಜ್ವರ ಕಾಣಿಸಿಕೊಂಡ ಬಳಿಕ ಮನೆಯ ಇತರ ಸದಸ್ಯರಿಗೂ ಜ್ವರ ಹರಡುತ್ತಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ. ಆದರೆ ವಾತಾವರಣದಲ್ಲಿನ ಬದಲಾವಣೆ ಹಾಗೂ ವೈರಲ್ ಸೋಂಕಿನ ಹಿನ್ನೆಲೆಯಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ. ಕಿಮ್ಸ್‌ನಲ್ಲಿ ಈ ತಿಂಗಳು ಹೊರರೋಗಿಗಳ ಪ್ರಮಾಣ ಶೇಕಡ 15ರಿಂದ 20ರಷ್ಟು ಹೆಚ್ಚಾಗಿದೆ.

ಜ್ವರ ಬಂದ ತಕ್ಷಣ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ ವೈದ್ಯರನ್ನು ಸಂಪರ್ಕಿಸಬೇಕು. ಅಗತ್ಯವಿದ್ದಲ್ಲಿ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು. ಜೊತೆಗೆ ಜನರು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ಹಾಗೂ ಸೋಂಕಿನ ಲಕ್ಷಣಗಳಿದ್ದಾಗ ಇತರರಿಂದ ಅಂತರ ಕಾಯ್ದುಕೊಳ್ಳುವುದು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಒಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ವೈರಲ್ ಫೀವರ್ ಜೊತೆಗೆ H1N1 ಪ್ರಕರಣಗಳೂ ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ ಪ್ರತಿಯೊಂದು ಜ್ವರವೂ H1N1 ಎಂದಲ್ಲ. ಹೀಗಾಗಿ ಭಯಪಡುವ ಬದಲು ಮುನ್ನೆಚ್ಚರಿಕೆ ವಹಿಸಿ, ಲಕ್ಷಣಗಳು ಕಂಡುಬಂದರೆ ಸಮಯಕ್ಕೆ ಸರಿಯಾಗಿ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಕ್ಯಾಮರಾ ಪರ್ಸನ್ ಹೇಮಂತ್ ಕುಮಾರ್ ಜೊತೆಗೆ, ಸಂಗಮೇಶ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ.

About The Author